ಜೈಲಲ್ಲೂ ನಿಲ್ಲದ ಪ್ರಜ್ವಲ್​ ರೇವಣ್ಣ ಕರ್ಮಕಾಂಡ..!

ಎಫ್‌ಎಸ್‌ಎಲ್ ವರದಿಯ ಪ್ರಕಾರ, ವಶಪಡಿಸಿಕೊಂಡ ಮೊಬೈಲ್ ಹಾಗೂ ಪೆನ್ ಡ್ರೈವ್‌ನಲ್ಲಿ ಒಟ್ಟು 173 ವಿಡಿಯೋ ಫೈಲ್‌ಗಳು ಪತ್ತೆಯಾಗಿವೆ.

By ರಶ್ಮಿ ಎಸ್. | Rashmi S

1 min read

WhatsAppPost
Prajwal revanna jail mobile phone case updates
Prajwal revanna jail mobile phone case updates

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣದ ಶಿಕ್ಷೆ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಮೇಲೆ ಇತ್ತೀಚೆಗೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಅವರ ಸೆಲ್‌ನಲ್ಲಿ ಅನಧಿಕೃತವಾಗಿ ಬಳಸುತ್ತಿದ್ದ ಅತ್ಯಾಧುನಿಕ 5G ಸ್ಮಾರ್ಟ್‌ಫೋನ್ ಮತ್ತು ಪೆನ್ ಡ್ರೈವ್ ಪತ್ತೆಯಾಗಿದ್ದು, ಇಡೀ ಜೈಲು ವ್ಯವಸ್ಥೆಯ ಭ್ರಷ್ಟಾಚಾರವನ್ನು ಬಯಲಿಗೆಳೆದಿತ್ತು. ಪ್ರಸ್ತುತ ಈ ಜಪ್ತಿ ಮಾಡಲಾದ ಎಲೆಕ್ಟ್ರಾನಿಕ್ ಸಾಧನಗಳನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ.

ಎಫ್‌ಎಸ್‌ಎಲ್ ವರದಿಯ ಪ್ರಕಾರ, ವಶಪಡಿಸಿಕೊಂಡ ಮೊಬೈಲ್ ಹಾಗೂ ಪೆನ್ ಡ್ರೈವ್‌ನಲ್ಲಿ ಒಟ್ಟು 173 ವಿಡಿಯೋ ಫೈಲ್‌ಗಳು ಪತ್ತೆಯಾಗಿವೆ. ಇದರಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಪೆನ್ ಡ್ರೈವ್ ಒಂದರಲ್ಲೇ ಸುಮಾರು 100 ಕ್ಕೂ ಹೆಚ್ಚು ತೀವ್ರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಇನ್ನುಳಿದಂತೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳು ಹಾಗೂ ಜನಪ್ರಿಯ ವೆಬ್ ಸೀರೀಸ್‌ಗಳು ಪತ್ತೆಯಾಗಿವೆ. ಕೈದಿಗಳ ಮನರಂಜನೆಗಾಗಿ ಜೈಲಿನ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಎಲ್‌ಇಡಿ ಟಿವಿಗೆ ಈ ಪೆನ್ ಡ್ರೈವ್ ಸಂಪರ್ಕಿಸಿ, ಪ್ರಜ್ವಲ್ ರೇವಣ್ಣ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರು ಎಂಬ ಕರಾಳ ಸತ್ಯವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಈ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸರಬರಾಜು ಮಾಡಲು ಜೈಲು ಸಿಬ್ಬಂದಿಯೇ ಸಾಥ್ ನೀಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಪ್ರಜ್ವಲ್ ರೇವಣ್ಣ ಇದ್ದ ಹೈ-ಸೆಕ್ಯುರಿಟಿ ಬ್ಯಾರಕ್‌ಗೆ ಮೊಬೈಲ್ ಮತ್ತು ಪೆನ್ ಡ್ರೈವ್ ತಲುಪಿಸಲು ಜೈಲಿನ ವಾರ್ಡನ್ ಪ್ರಕಾಶ್ ಎಂಬಾತನಿಗೆ ಬರೋಬ್ಬರಿ 1.7 ಲಕ್ಷ ರೂಪಾಯಿ ಲಂಚ ನೀಡಲಾಗಿತ್ತು. ಹೊರಗಿನಿಂದ ನವೀನ್ ಕುಮಾರ್ ಎಂಬಾತ ಮೊಬೈಲ್ ಖರೀದಿಸಿ ಕೊಟ್ಟರೆ, ಡಿ.ಜೆ ಹಳ್ಳಿ ಗಲಭೆ ಪ್ರಕರಣದ ವಿಚಾರಣಾಧೀನ ಕೈದಿಗಳಾದ ಮೊಹಮ್ಮದ್ ತೌಸೀಫ್ ಮತ್ತು ಸಿದ್ದಿಕ್ ಜೈಲಿನೊಳಗೆ ಸಿಮ್ ಕಾರ್ಡ್ ತರಲು ಸಹಾಯ ಮಾಡಿದ್ದರು. ಬಳಿಕ ಪ್ರಜ್ವಲ್ ರೇವಣ್ಣ ಅವರ ಸಹಕೈದಿ ಪ್ರತಾಪ್ ರೈ ಮೂಲಕ ಈ ಫೋನ್ ಮಾಜಿ ಸಂಸದನ ಕೈ ಸೇರಿತ್ತು. ಈ ಜಾಲವು ಜೈಲಿನಲ್ಲಿ ಗಣ್ಯ ಕೈದಿಗಳಿಗೆ ಸಿಗುತ್ತಿರುವ ಕಾನೂನುಬಾಹಿರ ವಿಐಪಿ ಸೌಲಭ್ಯಗಳು ಮತ್ತು ಭದ್ರತಾ ಲೋಪವನ್ನು ಜಗಜ್ಜಾಹೀರುಗೊಳಿಸಿದೆ.

Topics

ಸಂಬಂಧಿತ ಸುದ್ದಿಗಳು