ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ : ಆರೋಪಿಗಳ ಮೇಲೆ ಪೊಲೀಸರ ಫೈರಿಂಗ್
ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ಮೂವರು ಶಂಕಿತ ಆರೋಪಿಗಳು ಬೈಂದೂರು ಸಮೀಪದ ಒತ್ತಿನೆಣೆ ಪ್ರಕರಣದಲ್ಲಿ ಅಡಗಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು.
By ಅಶ್ವಥ್ ಆಚಾರ್ಯ | Ashwath Acharya
1 min read
ಉಡುಪಿ: ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಅಪ್ಡೇಟ್ಸ್ ಹೊರಬಿದ್ದಿದೆ. ಪ್ರಕರಣ ಪ್ರಮುಖ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಆತ್ಮರಕ್ಷಣೆಗೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಶಾರ್ಪ್ ಶೂಟರ್ ರಾಜು ಎಂಬಾತನ ಬಲ ಕಾಲಿಗೆ ಗುಂಡೇಟು ಬಿದ್ದು, ಉಡುಪಿ ಜಿಲ್ಲೆಯ ಗಡಿಭಾಗವಾಗಿರುವ ಬೈಂದೂರು ಒತ್ತಿನೆಣೆಯಲ್ಲಿ ಈ ಘಟನೆ ನಡೆದಿದೆ.
ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ಆರೋಪಿಗಳು ಬೈಂದೂರು ಸಮೀಪದ ಒತ್ತಿನೆಣೆ ಪ್ರಕರಣದಲ್ಲಿ ಅಡಗಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಉಪನಿರೀಕ್ಷಕರಾದ (ಎಸ್.ಐ) ತೇಜಸ್ವಿ ಹಾಗೂ ಪ್ರಸನ್ನ ಅವರ ನೇತೃತ್ವದ ವಿಶೇಷ ಪೊಲೀಸ್ ಪಡೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿತ್ತು.
ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವ ವೇಳೆಯಲ್ಲಿ ಪೊಲೀಸರು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆರೋಪಿಗಳು ಏಕಾಏಕಿಯಾಗಿ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಎಸ್‌ಐ ತೇಜಸ್ವಿ ಅವರಿಗೆ ಗಾಯಗಳಾಗಿವೆ. ಕಾರ್ಯಾಚರಣೆಯಲ್ಲಿದ್ದ ಎಸ್.ಐ ತೇಜಸ್ವಿ ಅವರಿಗೆ ಗಾಯಗಳಾಗಿವೆ.
ಆತ್ಮರಕ್ಷಣೆಗಾಗಿ ಶಾರ್ಪ್ ಶೂಟರ್ ಮೇಲೆ ಶೂಟೌಟ್
ಪೊಲೀಸರು ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ತಮ್ಮ ಹಾಗೂ ಜೊತೆಗಿದ್ದ ಪೊಲೀಸ್ ಸಿಬ್ಬಂದಿಯ ಪ್ರಾಣ ರಕ್ಷಣೆಗಾಗಿ ಕೂಡಲೇ ಶಸ್ತ್ರ ಪ್ರಯೋಗ ಮಾಡಿದ್ದಾರೆ. ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ ಉತ್ತರ ಪ್ರದೇಶ ಮೂಲದ ಶೂಟರ್ ರಾಜು ಎಂಬಾತನ ಮೇಲೆ ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಪೋಲಿಸರು ಹಾರಿಸಿದ ಗುಂಡು ಆರೋಪಿ ರಾಜು ಬಲಕಾಲಿಗೆ ತಾಗಿದ್ದು, ಆತ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಪರಿಸ್ಥಿತ ಲಾಭ ಪಡೆದುಕೊಂಡ ಇನ್ನಿಬ್ಬರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾರೆ. ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಆರೋಪಿ ಶೂಟರ್ ರಾಜುನನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಆರೋಪಿಗಳ ದಾಳಿಯಿಂದ ಗಾಯಗೊಂಡಿರುವ ಎಸ್‌ಐ ತೇಜಸ್ವಿ ಅವರನ್ನು ಕೂಡ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೂಕ್ತ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ
ಉಡುಪಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳಿದಿಬ್ಬರು ಆರೋಪಿಗಳ ಪತ್ತೆಗಾಗಿ ಬೈಂದೂರು ಹಾಗೂ ಸುತ್ತಮುತ್ತಲಿನ ಗಡಿಭಾಗಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಸದ್ಯ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆಯ ಹಿಂದೆ ಯಾವ ಪ್ರಭಾವಿಗಳ ಕೈವಾಡವಿದೆ ಅನ್ನೋದು ಇನ್ನೂ ಬಯಲಾಗಿಲ್ಲ. ಅಂತರಾಜ್ಯ ಶಾರ್ಪ್ ಶೂಟರ್‌ಗಳನ್ನು ಕರೆಯಿಸಿ ಸುಪಾರಿ ಕೊಟ್ಟವರು ಯಾರು ಅನ್ನೋದು ಆರೋಪಿ ರಾಜು ತನಿಖೆಯಿಂದ ನಂತರವೇ ಬಯಲಾಗೋದಕ್ಕೆ ಸಾಧ್ಯ.
ಪೊಲೀಸರು ಆರೋಪಿ ರಾಜುವನ್ನು ಇಂದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸಾಲು ಸಾಲು ಹತ್ಯೆ ಪ್ರಕರಣಗಳು ಕರಾವಳಿಗರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
Topics

