ಕೋಟ: ಸಂಜೀವಿನಿ ಒಕ್ಕೂಟಕ್ಕೆ ₹33.50 ಲಕ್ಷ ವಂಚನೆ:ಎಫ್‌ಐಆರ್ ದಾಖಲು
ಸಂಜೀವಿನಿ ಒಕ್ಕೂಟದ ನಕಲಿ ಸಹಿ, ಸೀಲ್ ಬಳಸಿಕೊಂಡು ಸರಕಾರದಿಂದ ಬಂದ ಕೋಟ್ಯಾಂತರ ರೂ.ವನ್ನು ಸ್ವತಃಕ್ಕೆ ಬಳಸಿಕೊಂಡಿರುವ ಘಟನೆ ಕುಂದಾಪುದಲ್ಲಿ ನಡೆದಿದೆ
By Meghana Pranuth | ಮೇಘನಾ ಪ್ರಣೂತ್
1 min read
ಉಡುಪಿ/ಕೋಟ: ಸಂಜೀವಿನಿ ಒಕ್ಕೂಟದ ನಕಲಿ ಸಹಿ ಹಾಗೂ ಸೀಲ್ ಬಳಸಿಕೊಂಡು ಸರಕಾರದಿಂದ ಬಂದ ಕೋಟ್ಯಾಂತರ ರೂಪಾಯಿ ಹಣವನ್ನು ತನ್ನ ಸ್ವತಃಕ್ಕೆ ಬಳಸಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ಹಾರ್ದಳ್ಳಿ - ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮೃದ್ದಿ ಸಂಜೀವಿನಿ ಒಕ್ಕೂಟದಲ್ಲಿ ನಡೆದಿದೆ.
ಹಾರ್ದಳ್ಳಿ ಮಂಡಳ್ಳಿ ನಿವಾಸಿ, ಸಮೃದ್ದಿ ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರ್ತಿ ಅಶ್ವಿನಿ (33 ವರ್ಷ) ಎಂಬಾಕೆಯ ವಿರುದ್ದ ಇದೀಗ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮೃದ್ದಿ ಸಂಜೀವಿನಿ ಒಕ್ಕೂಟದ ಅಡಿಯಲ್ಲಿ 54 ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ.
ಸರಕಾರದಿಂದ ಈ ಒಕ್ಕೂಟಕ್ಕೆ ಸುಮಾರು 52,50,000/- ಅನುದಾನ ಬಿಡುಗಡೆಯಾಗಿತ್ತು. ಈ ಸಂಪೂರ್ಣ ಹಣದ ವ್ಯವಹಾರವು ಕೆನರಾ ಬ್ಯಾಂಕ್‌ನ ಬಿದ್ಕಲ್‌ಕಟ್ಟೆ ಶಾಖೆಯ ಖಾತೆಯ ಮೂಲಕ ನಡೆಯುತ್ತಿತ್ತು. ಆದರೆ ಸರಕಾರದಿಂದ ಬಂದ ಅನುದಾನವನ್ನು ಅಗತ್ಯಕ್ಕೆ ತಕ್ಕಂತೆ ವಿವಿಧ ಸ್ವಸಹಾಯ ಸಂಘಗಳಿಗೆ ನಿಯಮಾನುಸಾರ ಹಂಚಿಕೆ ಮಾಡುವ ಜವಾಬ್ದಾರಿಯನ್ನು ಮುಖ್ಯ ಬರಹಗಾರ್ತಿ ಅಶ್ವಿನಿ ವಹಿಸಿಕೊಂಡಿದ್ದರು.
ನಕಲಿ ಸಹಿ, ಸೀಲ್ ಬಳಸಿ ₹52.50 ಲಕ್ಷ ಗುಳುಂ
ಆರೋಪಿ ಅಶ್ವಿನಿ ಸರಕಾರದಿಂದ ಬಂದ ಹಣವನ್ನು ನಿಜವಾದ ಅರ್ಹ ಸ್ವಸಹಾಯ ಸಂಘಗಳಿಗೆ ಹಂಚಿಕೆ ಮಾಡದೆ ವಂಚಿಸಿದ್ದಾರೆ. ತಾನು ಅಧ್ಯಕ್ಷೆಯಾಗಿರುವ ‘ಮಂದಾರ ಸ್ವಸಹಾಯ ಸಂಘ’ದ ಹೆಸರಿನಲ್ಲಿ ಹಾಗೂ ಕೆಲವು ಸದಸ್ಯರ ಹೆಸರಿನಲ್ಲಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಸಹಕಾರಿ ಸಂಘದ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯವರ ಅಧಿಕೃತ ಸೀಲ್ ಮತ್ತು ಸಹಿಗಳನ್ನು ನಕಲಿ ಮಾಡಿದ್ದಷ್ಟೇ ಅಲ್ಲದೆ, ವಿವಿಧ ಸಂಘಗಳ ಸದಸ್ಯರ ನಕಲಿ ಸಹಿಗಳನ್ನು ಮಾಡಿ ಒಟ್ಟು ₹33,50,000/- ಮೊತ್ತವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡು ಒಕ್ಕೂಟಕ್ಕೆ ಹಾಗೂ ಸದಸ್ಯರಿಗೆ ಭಾರಿ ಪ್ರಮಾಣದ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Topics

