udupiಪ್ರಮುಖ ಸುದ್ದಿಗಳು

Udupi Water Problem : ಉಡುಪಿ ಜಿಲ್ಲೆಯಲ್ಲಿ ಶೇಕಡಾ 33 ರಷ್ಟು ಮಳೆ ಕೊರತೆ : ನವೆಂಬರ್​ ನಲ್ಲೇ ಕುಡಿಯುವ ನೀರಿಗೆ ಹಾಹಾಕಾರ

ಬೇಸಿಗೆಯ ಏಪ್ರಿಲ್ ತಿಂಗಳು ಹತ್ತಿರವೂ ಬಂದಿಲ್ಲ, ಅದಕ್ಕೂ ಮುನ್ನವೇ ಅಂದರೆ ಮುಂಬರುವ ನವೆಂಬರ್ ತಿಂಗಳಿನಿಂದಲೇ ಜಿಲ್ಲೆಯ 123 ಗ್ರಾಮಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಲಿದೆ

By ರಶ್ಮಿ ಎಸ್. | Rashmi S

1 min read

WhatsAppPost
udupi water shortage 33 percent rainfall deficit drinking water crisis
udupi water shortage 33 percent rainfall deficit drinking water crisis

ಉಡುಪಿ ( Udupi News) : ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳು ಬಂತೆಂದರೆ ಸಾಕು, ರಾಜ್ಯದ ಹಲವೆಡೆ ಕುಡಿಯುವ ನೀರಿನ ಆಹಾಕಾರ ಶುರುವಾಗುತ್ತದೆ. ಆದರೆ ಕರಾವಳಿಯ ಜೀವನಾಡಿ ಜಿಲ್ಲೆಯಾದ ಉಡುಪಿಯಲ್ಲಿ ಈ ಬಾರಿ ಪರಿಸ್ಥಿತಿ ತೀರಾ ವಿಚಿತ್ರ ಹಾಗೂ ಆತಂಕಕಾರಿಯಾಗಿದೆ.

ಇನ್ನೂ ಕಡು ಬೇಸಿಗೆಯ ಏಪ್ರಿಲ್ ತಿಂಗಳು ಹತ್ತಿರವೂ ಬಂದಿಲ್ಲ, ಅದಕ್ಕೂ ಮುನ್ನವೇ ಅಂದರೆ ಮುಂಬರುವ ನವೆಂಬರ್ ತಿಂಗಳಿನಿಂದಲೇ ಜಿಲ್ಲೆಯ 123 ಗ್ರಾಮಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗಲಿದೆ ಎಂದು ಜಿಲ್ಲಾ ಪಂಚಾಯತ್ ಗಂಭೀರ ಮುನ್ನೆಚ್ಚರಿಕೆ ನೀಡಿದೆ.

ಈ ಬಾರಿಯ ಮುಂಗಾರು ಹಾಗೂ ಹಿಂಗಾರು ಮಳೆಗಳು ಕರಾವಳಿ ಭಾಗಕ್ಕೆ ಸಂಪೂರ್ಣ ಕೈಕೊಟ್ಟಿರುವುದೇ ಈ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡಾ 32 ರಷ್ಟು ಭಾರಿ ಮಳೆ ಕೊರತೆ ದಾಖಲಾಗಿದೆ. ಇದರ ನೇರ ಪರಿಣಾಮವಾಗಿ ಜಿಲ್ಲೆಯ ಪ್ರಮುಖ ನದಿಗಳು, ಹಳ್ಳ ಹಾಗೂ ತೋಡುಗಳಲ್ಲಿ ನೀರಿನ ಒಳಹರಿವು ಈಗಲೇ ಗಣನೀಯವಾಗಿ ತಳ ಹಿಡಿದಿದೆ.

ಸಾಮಾನ್ಯವಾಗಿ ಹರಿದು ತುಂಬಿ ತುಳುಕಬೇಕಿದ್ದ ಜಲಮೂಲಗಳು ಅಕ್ಟೋಬರ್ ಅಂತ್ಯದಲ್ಲೇ ಒಣಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮತ್ತೊಂದೆಡೆ, ಸೆಪ್ಟೆಂಬರ್‌ನಿಂದಲೇ ತಾಪಮಾನವು 34 ರಿಂದ 39 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದ್ದು, ಭತ್ತ ಕಾಳು ಕಟ್ಟುವ ಸಮಯದಲ್ಲಿ ಬಿಸಿಲಿನ ಹೊಡೆತಕ್ಕೆ ಸಿಲುಕಿ ಇಳುವರಿ ಕುಂಠಿತವಾಗುವ ಭೀತಿಯಲ್ಲಿ ರೈತರಿದ್ದಾರೆ.

ಬೇಸಿಗೆಯ ಆರಂಭಕ್ಕೂ ಮುನ್ನವೇ ಎದುರಾಗಿರುವ ಈ ಜಲಕಂಟಕವನ್ನು ಎದುರಿಸಲು ಜಿಲ್ಲಾಡಳಿತ ಈಗಿನಿಂದಲೇ ಯುದ್ಧೋಪಾದಿಯಲ್ಲಿ ಸಜ್ಜಾಗುತ್ತಿದೆ. ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಲು ಜಿಲ್ಲೆಯಾದ್ಯಂತ ಇರುವ 691 ಕಿಂಡಿ ಅಣೆಕಟ್ಟುಗಳಿಗೆ ಹಲಗೆಗಳನ್ನು ಅಳವಡಿಸುವ ಕಾರ್ಯ ತರಾತುರಿಯಲ್ಲಿ ಸಾಗಿದೆ.

ನೀರಿನ ತತ್ವಾರ ತಣಿಸಲು ಸರ್ಕಾರ ಮೊದಲ ಹಂತವಾಗಿ 12.5 ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಭವಿಷ್ಯದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಖಾಸಗಿ ಬಾವಿ ಹಾಗೂ ಕೊಳವೆಬಾವಿಗಳನ್ನು ಈಗಾಗಲೇ ಗುರುತಿಸಿ, ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ.

ಏಪ್ರಿಲ್ ಬರುವ ಮುನ್ನವೇ ನವೆಂಬರ್‌ನಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ, ಸಾರ್ವಜನಿಕರು ಈಗಿನಿಂದಲೇ ಜಲಸಂರಕ್ಷಣೆಗೆ ಮುಂದಾಗಬೇಕಿದೆ.

Topics

ಸಂಬಂಧಿತ ಸುದ್ದಿಗಳು