ಸ್ಯಾಂಡಲ್ ವುಡ್ ನಟಿ ಮಯೂರಿ ಕ್ಯಾತರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಕೃಷ್ಣನ ಸುಂದರಿ ಬಹುಕಾಲದ ಗೆಳೆಯ ಅರುಣ್ ಜೊತೆ ಇಂದು ಸಪ್ತಪದಿ ತುಳಿದಿದ್ದಾರೆ.

ರಾತ್ರಿ 2.30ರಿಂದ 3 ಗಂಟೆಯ ಬ್ರಾಹ್ಮೀ ಮುಹೂರ್ತದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕೇವಲ ನಟಿ ಮಯೂರಿ ಹಾಗೂ ಅರುಣ್ ಅವರ ಕುಟುಂಬಸ್ಥರು, ಅತ್ಯಾಪ್ತರು ಮಾತ್ರವೇ ಭಾಗಿಯಾಗಿದ್ದರು.

ನಟಿ ಮಯೂರಿ ಹಾಗೂ ಅರುಣ್ ಸುಮಾರು 10 ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ರು. ಇದೀಗ ಎರಡೂ ಮನೆಯವರ ಒಪ್ಪಿಗೆಯನ್ನು ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದ ಮಯೂರಿ, ಕೃಷ್ಣಲೀಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.

ನಂತರ ಇಷ್ಟ ಕಾಮ್ಯ, ರಸ್ತುಂ, ಆಟಕ್ಕುಂಟು ಲೆಕ್ಕಕ್ಕಿಲ್ಲ ಹಾಗೂ ಮೌನಂ ಸಿನಿಮಾಗಳಲ್ಲಿಯೂ ನಟಿ ಮಯೂರಿ ಮಿಂಚು ಹರಿಸಿದ್ದಾರೆ.

ರಾಜ್ ಪಂಡಿತ್ ನಿರ್ದೇಶನದಲ್ಲಿ ಸಿದ್ದವಾದ ಮೌನಂ ಸಿನಿಮಾದಲ್ಲಿ ಸಂಪೂರ್ಣ ಹೊಸಬರೇ ಆಗಿದ್ದರು ಕೂಡ ನಟಿ ಮಯೂರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಬಹುಕಾಲದ ಗೆಳೆಯನೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಅರುಣ್ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದರು ಅರುಣ್.

ನಟಿ ಮಯೂರಿ ಮದುವೆಯ ನಂತರದಲ್ಲಿಯೂ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ. ಅರುಣ್ ಸದ್ಯ ಬೆಂಗಳೂರಿನಲ್ಲಿಯೇ ಸೆಟಲ್ ಆಗಿದ್ದಾರೆ.
