ಬೆಂಗಳೂರು: ಈ ವರ್ಷದ ಐಪಿಎಲ್ ಟೂರ್ನಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ವೇಳೆ ಜಾರಿಗೆ ಬಂದಿದ್ದ “ಇಂಪ್ಯಾಕ್ಟ್ ಆಟಗಾರ” ನಿಯಮದಲ್ಲಿ (Change in Impact Player rule) ಬಿಸಿಸಿಐ ಮಹತ್ವದ ಬದಲಾವಣೆ ತಂದಿದೆ. ಶುಕ್ರವಾರ ಮುಂಬೈನಲ್ಲಿ ನಡೆದ ಬಿಸಿಸಿಐನ 19ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ (BCCI Apex Council meeting) ಈ ನಿರ್ಧಾರಕ್ಕೆ ಬರಲಾಗಿದೆ.
ದೇಶೀಯ ಕ್ರಿಕೆಟ್ ಟೂರ್ನಿಯಾಗಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿ ಬಿಸಿಸಿಐ ಇಂಪ್ಯಾಕ್ಟ್ ಆಟಗಾರ ನಿಯಮವನ್ನು ಪರಿಚಯಿಸಿತ್ತು. ಅದರಂತೆ ಪ್ರತೀ ತಂಡಗಳು ಆಡುವ 11ರ ಬಳಗದ ಜೊತೆ ನಾಲ್ಕು ಮಂದಿ ಬದಲಿ ಆಟಗಾರರ ಹೆಸರನ್ನು ಟಾಸ್’ಗೂ ಮೊದಲೇ ಘೋಷಿಸಬೇಕಿತ್ತು. ಈ ನಾಲ್ವರಲ್ಲಿ ಒಬ್ಬನನ್ನು ಇಂಪ್ಯಾಕ್ ಆಟಗಾರನಾಗಿ 14ನೇ ಓವರ್ ಒಳಗೆ ಬಳಸಿಕೊಳ್ಳುವ ನಿಯಮ ಮಾಡಲಾಗಿತ್ತು. ಈ ನಿಯಮದಲ್ಲಿ ಬಿಸಿಸಿಐ ಸಣ್ಣ ಬದಲಾವಣೆ ತಂದಿದ್ದು, ಮುಂದಿನ ಸಾಲಿನಿಂದ ಪಂದ್ಯದ ಯಾವುದೇ ಸಮಯದಲ್ಲಿ ಬೇಕಾದರೂ ಇಂಪ್ಯಾಕ್ಟ್ ಆಟಗಾರನನ್ನು ಬಳಸಿಕೊಳ್ಳಬಹುದಾಗಿದೆ.
ಈ ನಿಯಮದ ಜೊತೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪ್ರತೀ ಓವರ್”ನಲ್ಲಿ ಗರಿಷ್ಠ ಎರಡು ಬೌನ್ಸರ್’ಗಳನ್ನು ಎಸೆಯುವ ನಿಯಮ ಜಾರಿಗೆ ಬರಲಿದೆ. ಈ ಹಿಂದೆ ಓವರ್’ಗೆ ಒಂದೇ ಬೌನ್ಸರ್ ಎಸೆಯಬಹುದಾಗಿತ್ತು. ಆದರೆ ಬ್ಯಾಟ್ ಮತ್ತು ಬಾಲ್ ಮಧ್ಯೆ ಸಮಾನವಾದ ಸ್ಪರ್ಧೆ ಏರ್ಪಡಿಸುವ ಉದ್ದೇಶದಿಂದ ಓವರ್’ಗೆ ಎರಡು ಬೌನ್ಸರ್’ಗಳ ನಿಯಮವನ್ನು ಬಿಸಿಸಿಐ ಪರಿಚಯಿಸಲಿದೆ.
ಇದನ್ನೂ ಓದಿ : India tour of West Indies : ಪ್ರಥಮ ಟೆಸ್ಟ್ ಪಂದ್ಯಕ್ಕೆ ಡೊಮಿನಿಕಾ ತಲುಪಿದ ಟೀಮ್ ಇಂಡಿಯಾ, ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ ಆಟಗಾರರು
ಇದೇ ವೇಳೆ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಚೀನಾದ ಹಾಂಗ್’ಜೌನಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಹಾಗೂ ಪುರುಷರ ತಂಡಗಳನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಏಷ್ಯನ್ ಗೇಮ್ಸ್ ಸಂದರ್ಭದಲ್ಲೇ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ. ಹೀಗಾಗಿ ವಿಶ್ವಕಪ್’ನಲ್ಲಿ ಆಡದಿರುವ ಆಟಗಾರರನ್ನು ಏಷ್ಯನ್ ಗೇಮ್ಸ್’ಗೆ ಕಳುಹಿಸಲು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
BCCI Apex Council meeting: BCCI brought a significant change in the impact player rule