ಬೆಂಗಳೂರು: ಹವಾಮಾನ ಇಲಾಖೆಯು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (Flash Flood) ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದಿರಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Minister Lakshmi Hebbalkar) ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಉಡುಪಿಯ ಜಿಲ್ಲಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಸಚಿವರು ಸಂದೇಶ ರವಾನಿಸಿದ್ದಾರೆ.
ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹಠಾತ್ ಪ್ರವಾಹ (Flash Flood) ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲಾಡಳಿತ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರೂ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.
ಜಿಲ್ಲೆಯ ಜೀವನದಿಗಳು ತುಂಬಿ ಹರಿಯುತ್ತಿರುವುದರಿಂದಾಗಿ ಬಹುತೇಕ ಕಡೆಗಳಲ್ಲಿ ಕೃತಕ ನೆರೆ ಆವರಿಸಿದೆ. ಬಹುತೇಕ ಕಡೆಗಳಲ್ಲಿ ಮರಗಳು ಉರುಳಿಬಿದ್ದಿದ್ದು, ಮನೆಗಳಿಗೆ ಹಾನಿಯಾಗಿದೆ. ಇನ್ನು ಕಾಪು ಸಮೀಪದ ಉಳಿಯಾರಗೋಳಿ ದಂಡತೀರ್ಥ ಶಾಲೆಯ ಬಳಿಯಲ್ಲಿ ಬಾರೀ ಗಾತ್ರದ ಮರವೊಂದು ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳು ತುಂಡಾಗಿವೆ.
ಇದನ್ನೂ ಓದಿ : Heavy Rainfall in Karnataka : ರಾಜ್ಯದಲ್ಲಿ ಭಾರೀ ಮಳೆ : 27 ಮಂದಿ ಸಾವು
ಇದರಿಂದಾಗಿ ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದೆ. ಬೈಂದೂರು ತಾಲೂಕಿನಲ್ಲಿ ಸೌಪರ್ಣಿಕಾ ನದಿ ಹಾಗೂ ಬ್ರಹ್ಮಕುಂಡ ನದಿ ತುಂಬಿ ಹರಿಯುತ್ತಿದೆ. ಹೊಸಾಡು, ಚಿಕ್ಕಳಿ, ನಾಡ, ಮಾರಣಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃತಕ ನೆರೆ ಹಾವಳಿ ಉಂಟಾಗಿದೆ. ವಾರಾಹಿ ನದಿ ತುಂಬಿ ಹರಿಯುತ್ತಿದ್ದು, ಹಾಲಾಡಿ, ಬಲಾಡಿ, ಹಳ್ನಾಡು, ಕಂಡ್ಲೂರು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿದೆ.
Flash Flood Forecast: Minister Lakshmi Hebbalkar warns to be careful