ಬೆಂಗಳೂರು : ರಾಜ್ಯದಲ್ಲಿ ಶಿಕ್ಷಣ ವ್ಯಾಪಾರೀಕರಣದ ತುತ್ತತುದಿಯಲ್ಲಿದೆ. ನರ್ಸರಿಯಿಂದ ಆರಂಭಿಸಿ ಸ್ನಾತಕೋತ್ತರ ಕೋರ್ಸ್ ಗಳವರೆಗೂ ಎಲ್ಲಾ ಕಡೆ ಹಣದಿಂದ ಕೊಡು ಕೊಳ್ಳುವಿಕೆಯ ವ್ಯಾಪಾರವೇ ನಡೆದಿದೆ. ಇದರೊಂದಿಗೆ ಟ್ಯೂಶನ್ ಎಂಬ ಸುಲಿಗೆಯೂ ಎಲ್ಲೇಮೀರಿದೆ. ಆದರೆ ಈಗ ಸರ್ಕಾರ (Karnataka Government) ಕೊನೆಗೂ ಎಚ್ಚೆತ್ತುಕೊಂಡಿದ್ದು ಟ್ಯೂಶನ್ ಮಾಫಿಯಾ(Tution Mafia) ಹಾಗೂ ಉಪನ್ಯಾಸಕರ ಕಳ್ಳಾಟಗಳಿಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ (Karnataka Education Department) ಸಿದ್ಧವಾಗಿದೆ.
ಪಿಯುಸಿ, ಎಸ್ಎಸ್ಎಲ್ಸಿ, ಪದವಿ ಹೀಗೆ ಶಿಕ್ಷಣ ಯಾವುದೇ ಆದರೂ ಟ್ಯೂಶನ್ ಅನಿವಾರ್ಯ ಎಂಬಷ್ಟರ ಮಟ್ಟಿಗೆ ಟ್ಯೂಶನ್ ಮಾಫಿಯ ಸದ್ದು ಮಾಡ್ತಿದೆ. ಆದರೆ ಈಗ ಸರ್ಕಾರಿ ಅನುದಾನಿತ ಶಾಲೆ ಕಾಲೇಜುಗಳ ಉಪನ್ಯಾಸಕರಿಗೆ ಸರ್ಕಾರ ಶಾಕ್ ನೀಡಿದೆ. ಟುಟೋರಿಯಲ್, ಕೋಚಿಂಗ್ ಸೆಂಟರ್ ಅಲ್ಲಿ ಪಾರ್ಟ್ ಟೈಮ್ ವರ್ಕ್ ಮಾಡಿದ್ರೆ ಸರ್ಕಾರಿ ಕೆಲಸ ಲೈಫ್ ಟೈಮ್ ಹೋಗುತ್ತೆ ಎಂದು ಸರ್ಕಾರ ಶಿಕ್ಷಕರಿಗೆ, ಉಪನ್ಯಾಸಕರಿಗೆ ಖಡಕ್ ಎಚ್ಚರಿಕೆ ರವಾನಿಸಿದೆ.
ಖಾಸಗಿ ಟ್ಯುಟೋರಿಯಲ್ ಅನ್ನು ಸರ್ಕಾರಿ ಉಪನ್ಯಾಸಕರು ನಡೆಸುವಂತಿಲ್ಲ. ಮಾತ್ರವಲ್ಲ ಈ ರೀತಿಯ ಟ್ಯುಟೋರಿಯಲ್ ಅಲ್ಲಿ ಪಾಠ ಮಾಡುವಂತಿಲ್ಲ. ಕೋಚಿಂಗ್ ಕೂಡ ನಿಯಮ ಬಾಹಿರ. ಈ ರೀತಿ ಕೆಲಸದಲ್ಲಿ ತೊಡಗಿಕೊಂಡರೇ ಶಾಶ್ವತವಾಗಿ ಉದ್ಯೋಗದಿಂದ ವಜಾಮಾಡುವುದಾಗಿ ಸರ್ಕಾರ ಎಚ್ಚರಿಸಿದೆ.
ಇದನ್ನೂ ಓದಿ : ಶಾಲೆಗಳಿಗೆ 15 ದಿನಗಳ ಮಧ್ಯಂತರ ರಜೆ ರದ್ದು : ರಾಜ್ಯ ಸರಕಾರದ ಮಹತ್ವದ ಆದೇಶ
ಈ ಬಗ್ಗೆ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಹಾಗಿದ್ದರೇ ಸರ್ಕಾರದ ಆದೇಶದಲ್ಲಿ ಏನಿದೆ ಅನ್ನೋದನ್ನು ನೋಡೋದಾದರೇ,
1. ಡಿಪ್ಲೊಮೊ, ಇಂಜಿನಿಯರಿಂಗ್, ಇತರೆ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಟುಟೋರಿಯಲ್ ಸಂಸ್ಥೆ ಕಾರ್ಯ ನಿರ್ವಹಿಸಲು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯೋದು ಕಡ್ಡಾಯ.
2. ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 35 ಮತ್ತು ಕರ್ನಾಟಕ ಟುಟೋರಿಯಲ್ ಇನ್‌ಸ್ಟಿಟ್ಯೂಷನ್ಸ್-2001ರ ಪ್ರಕಾರ, ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
3. ಅನಧಿಕೃತವಾಗಿ ಮನೆಪಾಠ, ಸಿಇಟಿ ಕೋಚಿಂಗ್ ಸೇರಿ ಇತರೆ ಟುಟೋರಿಯಲ್‌ಗಳನ್ನು ನಡೆಸುವುದು ಅನಧಿಕೃತ ಸಂಸ್ಥೆಗಳನ್ನು ಹೊಂದುವುದು ಕೂಡ ಅಪರಾಧವಾಗಿದೆ.
4. ಟ್ಯುಟೋರಿಯಲ್ ಗಳು ನಿಯಮಗಳ ಪ್ರಕಾರ ಪ್ರತಿ ವರ್ಷ ಇಲಾಖೆಗೆ ವಾರ್ಷಿಕ ವರದಿಯನ್ನು ಸಲ್ಲಿಸಿ ನೋಂದಣಿ ನವೀಕರಣ ಮಾಡಿಕೊಳ್ಳಬೇಕು ಅಂತ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ವರ್ಷದಲ್ಲಿ 3 ಬಾರಿ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ
ಇನ್ನೂ ಸರ್ಕಾರದ ನಿಯಮಗಳ ಪ್ರಕಾರ ಟುಟೋರಿಯಲ್ ನಡೆಸಲು ಅರ್ಹತೆ ಏನಿರಬೇಕು ಎಂಬುದನ್ನು ಗಮನಿಸೋದಾದರೇ,
1.ನಿಗದಿತ ವಿಸ್ತೀರ್ಣವುಳ್ಳ ತರಗತಿ ಕೋಣೆಗಳು, ಶೌಚಾಲಯ, ನೀರಿನ ವ್ಯವಸ್ಥೆ ಕಡ್ಡಾಯವಾಗಿ ಹೊಂದಿರಬೇಕು.
2.ಗರಿಷ್ಠ 30 ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪೀಠೋಪಕರಣಗಳ ವ್ಯವಸ್ಥೆ ಮಾಡಬೇಕು.
3. ಟ್ಯೂಶನ್ ನಡೆಸುವ ಕೊಠಡಿಗಳು ಪ್ರತಿ ವಿದ್ಯಾರ್ಥಿಗೆ ಕನಿಷ್ಠ 5ರಿಂದ 7 ಚದರ ಅಡಿ ವಿಸ್ತೀರ್ಣದ ಜಾಗವನ್ನು ಹೊಂದಿರಬೇಕು.
4.ಪರಿಣಿತ ಉಪನ್ಯಾಸಕರು, ಶಿಕ್ಷಕರನ್ನು ನೇಮಿಕಾತಿ ಕಡ್ಡಾಯ -ವಿದ್ಯಾರ್ಹತೆ, ಅನುಭವ, ಸಂಭಾವನೆ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು.
5. ವಿದ್ಯಾರ್ಥಿಗಳಿಂದ ಪಡೆದ ಟಟೋರಿಯಲ್ ಶುಲ್ಕದ ವಿವರಗಳನ್ನು ರಶೀದಿಗಳ ಸಮೇತ ಸಲ್ಲಿಕೆ ಮಾಡಬೇಕು.
6.ನಿಯಮಗಳನ್ನು ಉಲ್ಲಂಸಿದ್ದಲ್ಲಿ ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸಿ ಟುಟೋರಿಯಲ್ ಕಾರ್ಯವನ್ನು ಸ್ಥಗಿತಗೊಳಿಸಲು ಅವಕಾಶವಿದೆ ಎಂದು ಇಲಾಖೆ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಸಾವಿರಾರು ಅನಿಧಿಕೃತ ಟ್ಯುಟೋರಿಯಲ್ ಗಳಿದ್ದು, ಉಪನ್ಯಾಸಕರು ಕಾಲೇಜ್ ಗಳಲ್ಲಿ ಸೂಕ್ತ ಬೋಧನೆ ಮಾಡದೇ ಮಕ್ಕಳನ್ನು ಟ್ಯೂಶನ್ ಪಡೆಯುವಂತೆ ಒತ್ತಾಯಿಸುತ್ತಾರೆ ಎಂಬ ಆರೋಪಗಳು ಹಲವು ಭಾರಿ ಕೇಳಿಬಂದಿವೆ. ಈಗ ಸರ್ಕಾರ ಈ ಅಕ್ರಮ ಟ್ಯೂಶನ್ ಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದು ಇದರಿಂದ ಬಡ ಪ್ರತಿಭಾವಂತ ಮಕ್ಕಳಿಗೆ ಸಹಾಯವಾಗಲಿದ್ದು, ಪೋಷಕರ ಸುಲಿಗೆಯೂ ನಿಲ್ಲಲಿದೆ.