Yuvraj Singh World Record : ಬೆಂಗಳೂರು: ವೈಟ್ ಬಾಲ್ ಕ್ರಿಕೆಟ್’ನಲ್ಲಿ ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. ಪಂಜಾಬ್’ನ ವೀರಪುತ್ರ ಯುವರಾಜ್ ಸಿಂಗ್ ಭಾರತದ ಎರಡು ವಿಶ್ವಕಪ್ ಗೆಲುವುಗಳ ರೂವಾರಿ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಲು ಕಾರಣ ಯುವರಾಜ ವೀರೋಚಿತ ಆಟ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, ಸಿಕ್ಸರ್ ಸರ್ಕಾದ ಯುವರಾಜ್ ಸಿಂಗ್ ವೃತ್ತಿಪರ ಕ್ರಿಕೆಟ್’ನಲ್ಲಿ ತಾವು ಆಡಿದ ಎಲ್ಲಾ ಚಾಂಪಿಯನ್’ಷಿಪ್’ಗಳಲ್ಲಿ ಕಪ್ ಗೆದ್ದ ಸಾಧನೆ ಮಾಡಿದ್ದಾರೆ.

ಯುವರಾಜ್ ಸಿಂಗ್ ಅಂಡರ್-15 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 2000ನೇ ಇಸವಿಯಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆದ್ದಾಗ ಯುವರಾಜ್ ಸಿಂಗ್ ಆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಅದೇ ವರ್ಷ ಭಾರತ ಸೀನಿಯರ್ ತಂಡ ಸೌರವ್ ಗಂಗೂಲಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಗೆದ್ದಾಗ ಯುವರಾಜ್ ಸಿಂಗ್ ಆ ತಂಡದ ಸದಸ್ಯರಾಗಿದ್ದರು.
2007ರಲ್ಲಿ ಧೋನಿ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದಲ್ಲೂ ಯುವರಾಜ್ ಸಿಂಗ್ ಇದ್ದರು. ಯುವಿ ಒಂದೇ ಓವರ್’ನಲ್ಲಿ ಆರು ಸಿಕ್ಸರ್ಸ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದು ಅದೇ ಟೂರ್ನಿಯಲ್ಲಿ. ಇನ್ನು 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅವರ ಆಲ್ರೌಂಡ್ ಆಟದ ಪರಿಣಾಮ ಭಾರತ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆದ್ದಿತ್ತು.
ಇದನ್ನೂ ಓದಿ : Gautham Gambhir 1 Rs Meals : ಒಂದು ರೂಪಾಯಿಗೆ ಹೊಟ್ಟೆ ತುಂಬಾ ಊಟ ಹಾಕುತ್ತಿದ್ದರು ಗೌತಮ್ ಗಂಭೀರ್
ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ ಚಾಂಪಿಯನ್ ಆದಾಗ ಯುವಿ ಆ ತಂಡಗಳಲ್ಲಿದ್ದರು. ಇದೀಗ ಇಂಗ್ಲೆಂಡ್’ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ಸ್ ತಂಡದ ನಾಯಕತ್ವ ವಹಿಸಿದ್ದ ಯುವರಾಜ್ ಸಿಂಗ್, ತಂಡಕ್ಕೆ ಪ್ರಶಸ್ತಿ ಗೆದ್ದು ಕೊಟ್ಟಿದ್ದಾರೆ.

ಬರ್ಮಿಂಗ್’ಹ್ಯಾಮ್’ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ನಾಯಕತ್ವದ ಭಾರತ ಚಾಂಪಿಯನ್ಸ್ ತಂಡ ಯೂನುಸ್ ಖಾನ್ ಸಾರಥ್ಯದ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು 5 ವಿಕೆಟ್’ಗಳಿಂದ ಬಗ್ಗು ಬಡಿದು ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದುಕೊಂಡಿತು.
ಇದನ್ನೂ ಓದಿ : Rahul Dravid : ರಾಹುಲ್ ದ್ರಾವಿಡ್ ಬಗ್ಗೆ ರಾಜ್ಯ ಸರ್ಕಾರ, ರಾಜ್ಯ ಕ್ರಿಕೆಟ್ ಸಂಸ್ಥೆಗೆ ಏಕಿಷ್ಟು ನಿರ್ಲಕ್ಷ್ಯ ?
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಪಾಕ್ ಪರ ಶೋಯೆಬ್ ಮಲಿಕ್ 36 ಎಸೆತಗಳಲ್ಲಿ 3 ಸಿಕ್ಸರ್’ಗಳ ನೆರವಿನಿಂದ 41 ರನ್ ಸಿಡಿಸಿದರು. ನಂತರ ಗುರಿ ಬೆನ್ನಟ್ಟಿದ ಭಾರತ ಚಾಂಪಿಯನ್ಸ್ ಆರಂಭದಲ್ಲೇ ರಾಬಿನ್ ಉತ್ತಪ್ಪ (10) ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಬ್ಬ ಓಪನರ್ ಅಂಬಾಟಿ ರಾಯುಡು 30 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಇದನ್ನೂ ಓದಿ ; Yuvraj Singh: 42ನೇ ವಯಸ್ಸಲ್ಲೂ ಅದೇ ಖದರ್, ಅದೇ ಪವರ್: ಕಾಂಗರೂ ಬೇಟೆಯಾಡಿದ ಯುವರಾಜ !
ಮಧ್ಯಮ ಕ್ರಮಾಂಕದಲ್ಲಿ ಯೂಸುಫ್ ಪಠಾಣ್ 16 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಭಾರತ ಚಾಂಪಿಯನ್ಸ್ ತಂಡ 19.1 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಯುವರಾಜ್ ಸಿಂಗ್ ಗೆದ್ದಿರುವ ಚಾಂಪಿಯನ್’ಷಿಪ್’ಗಳು:
- U15 ವಿಶ್ವಕಪ್
- U19 ವಿಶ್ವಕಪ್
- ಚಾಂಪಿಯನ್ಸ್ ಟ್ರೋಫಿ
- ಟಿ20 ವಿಶ್ವಕಪ್
- ಏಕದಿನ ವಿಶ್ವಕಪ್
- ಐಪಿಎಲ್ ಕಪ್ (2 ಬಾರಿ)
- ದುಲೀಪ್ ಟ್ರೋಫಿ
- ಎನ್.ಪಿ.ಕೆ ಸಾಳ್ವೆ ಚಾಲೆಂಜರ್ಸ್ ಟ್ರೋಫಿ
- ಇರಾನಿ ಕಪ್
- ಟಿ20 ಲೀಗ್
- ರೋಡ್ ಸೇಫ್ಟಿ ಟ್ರೋಫಿ
- ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್
Yuvraj Singh World Record Win 3 world cup 12 ICC Trophy