Shirur Land Slide: ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸಮೀಪದ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಲ್ಲಿ ಮೃತಪಟ್ಟಿರುವ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ (Lorry Driver Arjun) ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತ ಅರ್ಜುನ್ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದೆ.

ಮೃತ ಅರ್ಜುನ್ ಕುಟುಂಬಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಪ್ರಕೃತಿ ವಿಕೋಪ ಪರಿಹಾರದಡಿ ಐದು ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿದೆ. ಭೀಕರ ಗುಡ್ಡ ಕುಸಿತದ ಬಳಿಕ ಸೆಪ್ಟೆಂಬರ್ 25 ರಂದು ಶಿರೂರಿನ ಗಂಗಾವಳಿ ನದಿಯಲ್ಲಿ ಅರ್ಜುನ್ ಮೃತದೇಹ ಮತ್ತು ಆತ ಚಲಾಯಿಸುತ್ತಿದ್ದ ಲಾರಿ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಇನ್ನು ಅರ್ಜುನ್ ಮೃತದೇಹವನ್ನು ಕಳುಹಿಸುವುದರಲ್ಲೂ ಉತ್ತರ ಕನ್ನಡ ಜಿಲ್ಲಾಡಳಿತ
ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.ಶವಪೆಟ್ಟಿಗೆ ಇಲ್ಲದೆಯೇ ಬಟ್ಟೆಯಲ್ಲಿ ಕಟ್ಟಿ ಮೃತದೇಹವನ್ನು ಕಳುಹಿಸಲಾಗಿದೆ ಎಂದು ಹೇಳಲಾಗಿದ್ದು, ಉಡುಪಿಯಲ್ಲಿ ಸಮಾಜ ಸೇವಕರ ಸಹಕಾರದಿಂದ ಮೃತದೇಹ ಕೊಂಡೊಯ್ಯಲು ಶವಪೆಟ್ಟಿಗೆಗೆ ಸೂಕ್ತ ಪೆಟ್ಟಿಗೆ ವ್ಯವಸ್ಥೆಯನ್ನು ಈಶ್ವರ್ ಮಲ್ಪೆ ಮತ್ತು ನಿತ್ಯಾನಂದ ಒಳಕಾಡು ಅವರುಗಳು ಕಲ್ಪಿಸಿದ್ದಾರೆ.

ಶಿರೂರಿನಿಂದ ಅರ್ಜುನ್ ಮೃತದೇಹವನ್ನು ರಸ್ತೆ ಮಾರ್ಗವಾಗಿ ಮಂಗಳೂರಿಗೆ ತೆಗೆದುಕೊಂಡು ಹೋಗಿ ಬಳಿಕ ಅರ್ಜುನ್ ಹುಟ್ಟೂರು ಕೋಝಿಕ್ಕೋಡ್ ಗೆ ರವಾನೆ ಮಾಡಲಾಗಿದೆ. ಈ ವೇಳೆ ಉಡುಪಿಯ ಚಿತ್ತರಂಜನ್ ಸರ್ಕಲ್ ನಲ್ಲಿ ಕೇರಳ ಮೂಲದವರು ಸೇರಿದಂತೆ ಸಾರ್ವಜನಿಕರು ಮೃತದೇಹದ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಥಲಸ್ಸೇಮಿಯಾ ಬಾಲಕನಿಗೆ ಮೊದಲ ಬಾರಿಗೆ ಯಶಸ್ವಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್
ಗಂಗಾವಳಿ ನದಿಯ ಆಳದಲ್ಲಿ ಮುಳುಗಿದ್ದ ಅರ್ಜುನ್ ಲಾರಿ ಮತ್ತು ಮೃತದೇಹವನ್ನು ಪತ್ತೆ ಹಚ್ಚುವಲ್ಲಿ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರ್ಯಾಚರಣೆ ಆರಂಭದಿಂದಲೂ ಸ್ಥಳದಲ್ಲಿ ಕೆಲಸ ನಿರ್ವಹಿಸಿದ್ದ ಈಶ್ವರ್ ಮಲ್ಪೆ ತೋರಿಸಿದ ಸ್ಥಳದಲ್ಲಿಯೇ ಕೊನೆಗೆ ಲಾರಿ ಪತ್ತೆಯಾಗಿದೆ.
ಶಿರೂರಿನಲ್ಲಿ ದುರಂತದಲ್ಲಿ ನಾಪತ್ತೆಯಾಗಿರುವ ಇನ್ನೂ ಇಬ್ಬರಿಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಡ್ರೆಜ್ಜಿಂಗ್ ಯಂತ್ರದ ಮೂಲಕ ಹುಡುಕಾಟ ನಡೆಸಿದ್ದು, ಇನ್ನೂ ಮೂರು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಯಲಿದೆ. ಒಂದು ವೇಳೆ ಪತ್ತೆಯಾಗಿದಿದ್ದರೆ ಅವರ ಕುಟುಂಬಸ್ಥರಿಗೆ ಸೂಕ್ತ ಪರಿಹಾರದೊಂದಿಗೆ ಮರಣ ಪ್ರಮಾಣಪತ್ರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಈಗಾಗಲೇ ತಿಳಿಸಿದ್ದಾರೆ.
ಇದನ್ನೂ ಓದಿ : ದೆಹಲಿಯಿಂದ ಬಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
Shirur Land Slide Lorry driver arjun dead body handed over to family