ಬೆಂಗಳೂರು: ಗಂಗೇನಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಿನ್ನೆ ಸಂಜೆ ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ.
ನವದೆಹಲಿಯಿಂದ ನಿನ್ನೆ ಸಂಜೆ ಬೆಂಗಳೂರಿಗೆ ಆಗಮಿಸಿದ್ದ ಹೆಚ್.ಡಿ. ಕುಮಾರಸ್ವಾಮಿ ಏರ್ ಪೋರ್ಟ್ ನಿಂದ ನೇರವಾಗಿ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಕಳೆದ ವಾರ ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಾ ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ಬೆಂಗಳೂರು ಗಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ ಜಮೀನನ್ನು ಮೃತಪಟ್ಟವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದ್ದು, ಅಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಜಂಟಿಯಾಗಿ ಭಾಗಿಯಾಗಿರುವ ಆರೋಪ ಇದಾಗಿದೆ.

ಹೆಚ್.ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯಲ್ಲಿ ಡಿನೋಟಿಫೈ ಮಾಡಲಾಗಿದ್ದು ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಕುಮಾರಸ್ವಾಮಿ ಬಾಮೈದನ ಪಾಲಾಗಿದ್ದಲ್ಲದೇ ಬಡವರ ನಿವೇಶನಗಳಿಗೆ ಹಂಚಿಕೆಯಾಗಿದ್ದ ಜಮೀನಿನನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ನಿನ್ನೆ ಸಂಜೆ ಸುಮಾರು ಒಂದೂವರೆ ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ತಮಗೆ ಯಾವುದೇ ಸಮನ್ಸ್ ಬಂದಿರಲಿಲ್ಲ, ತಾವೇ ಸ್ವ ಇಚ್ಛೆಯಿಂದ ಹಾಜರಾಗಿ ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಇಂದು ಬೆಂಗಳೂರಿನ ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಮೇಲಿನ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾಮೀನಿನ ಮೇಲೆ ಹೊರಗಿರುವ ಕುಮಾರಸ್ವಾಮಿ ಮೊದಲು ರಾಜಿನಾಮೆ ನೀಡಲಿ ಎಂದು ಹೇಳಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಚುನಾವಣಾ ಬಾಂಡ್ ಸಂಬಂಧಿಸಿದಂತೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆಯೂ ಎಫ್ ಐ ಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅವರು ರಾಜಿನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿರುವ ಸಿದ್ಧರಾಮಯ್ಯ, ಕುಮಾರಸ್ವಾಮಿಯವರು ರಾಜಿನಾಮೆ ನೀಡಲಿ, ಚುನಾವಣಾ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ಮೋದಿಯವರೂ ರಾಜಿನಾಮೆ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
Union minister kumaraswamy attended lokayukta police enquiry