ಬೆಳಗಾವಿ: ದಸರಾ ಹಬ್ಬದ ಸಮಯದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಗೃಹ ಲಕ್ಷ್ಮೀ ಯೋಜನೆ(Gruhalakshmi scheme) ಮತ್ತೊಮ್ಮೆ ಸದ್ದು ಮಾಡಿದೆ.
ಬೆಳಗಾವಿ ಜಿಲ್ಲೆಯ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಯೊಬ್ಬರು ಯೋಜನೆಯಿಂದ ಕೂಡಿಟ್ಟ ಹಣದಲ್ಲಿ ತಮ್ಮ ಮಗನಿಗೆ ಹೊಸ ಬೈಕ್ ಕೊಡಿಸಿದ್ದಾರೆ.ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ಗೃಹ ಲಕ್ಷ್ಮೀ ಯೋಜನೆಯಿಂದ ಸಿಕ್ಕಿದ ಹಣವನ್ನು ಕೂಡಿಟ್ಟು ಹೊಸ ದ್ವಿಚಕ್ರ ವಾಹನ ಕೊಡಿಸಿದ್ದಾರೆ.
ಆಯುಧ ಪೂಜೆ ಮತ್ತು ಮಹಾನವಮಿಯ ದಿನವಾದ ಇಂದು ಶೋ ರೂಮ್ ನಿಂದ ಬೈಕ್ ಖರೀದಿಸಿ ತಂದು ಪೂಜೆ ಮಾಡಿ ತಾಯಿ ಭಾಗವ್ವಾ ಸಣ್ಣಕ್ಕಿ ಮತ್ತು ಪುತ್ರ ರಮೇಶ ಸಣ್ಣಕ್ಕಿ ಸಂಭ್ರಮಿಸಿದ್ದಾರೆ.ರಾಜ್ಯ ಸರ್ಕಾರದಿಂದ ತಮ್ಮದೇ ನಿರ್ವಹಣೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ನೀಡಲಾಗುತ್ತಿರುವ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಬೈಕ್ ಖರೀದಿಸಿದ ತಮ್ಮ ತವರು ಜಿಲ್ಲೆಯ ಕೌಜಲಗಿ ಗ್ರಾಮದ ತಾಯಿ ಮತ್ತು ಮಗನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ( Lakshmi Hebbalkar) ಅಭಿನಂದನಾ ಪತ್ರ ಬರೆದು ಶುಭ ಹಾರೈಸಿದ್ದಾರೆ.

Image Credit to Original Source
ಈ ಹಿಂದೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಎಂಎಂ ನೀರಲಗಿ ಗ್ರಾಮದಲ್ಲಿ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಯಾಗಿರುವ ಅತ್ತೆ ದಾಕ್ಷಾಯಿಣಿ ತಮ್ಮ ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಅವರಿಗೆ ಹತ್ತು ಕಂತುಗಳ ಇಪ್ಪತ್ತು ಸಾವಿರ ರೂಪಾಯಿ ಹಣ ಕೂಡಿಟ್ಟು ಜನರಲ್ ಸ್ಟೋರ್ ಮತ್ತು ಬಳೆ ಅಂಗಡಿ ಹಾಕಿ ಕೊಟ್ಟಿದ್ದರು.
ಇದಲ್ಲದೇ, ಹಾನಗಲ್ ತಾಲೂಕಿನ ಬಾಳಬಿಂಡ ಗ್ರಾಮದ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿ ಚಂಪಾವತಿ ಕರೆವ್ವನವರ ಯೋಜನೆಯ ಹಣದಲ್ಲಿ ಮನೆಗೆ ವಾಷಿಂಗ್ ಮೆಷೀನ್ ಖರೀದಿಸಿದ್ದರು.

ಇದಕ್ಕೂ ಮೊದಲು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಅಕ್ಕಾತಾಯಿ ಲಂಗೋಟಿ ಯೋಜನೆಯ ಹಣವನ್ನು ಕೂಡಿಟ್ಟು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಅಕ್ಕಾ ತಾಯಿ ಹೋಳಿಗೆ ಊಟ ಹಾಕಿಸಿದ್ದ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನವನ್ನೂ ಸೆಳೆದಿತ್ತು. ಆ ಬಳಿಕ ಅದನ್ನು ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲೂ ಸಿಎಂ ಸಿದ್ಧರಾಮಯ್ಯ ಹಂಚಿಕೊಂಡಿದ್ದರು.