ಮಂಗಳೂರು : ಸಾಧನೆಯ ತುಡಿತವಿದ್ದರೆ ಯಾವುದು ಅಸಾಧ್ಯವಲ್ಲ ಅನ್ನೋದನ್ನು ಈತ ಸಾಧಿಸಿ ತೋರಿಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (Mangalore) ನಗರದ ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಶಶಿಕಾಂತ ಹಿರೇಮಠ್ (Shashikant Hiremath) ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬ್ರಹ್ಮಾವರದ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ವಾಕ್ ಹಾಗೂ ಶ್ರವಣ ದೋಷ ವಿಭಾಗದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲೆಯಲ್ಲಿ ಶಶಿಕಾಂತ ಹಿರೇಮಠ್ ಪ್ರಸ್ತುತ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾನೆ. 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ ವೇಳೆಯಲ್ಲಿ ಶಶಿಕಾಂತ್ ಹಿರೇಮಠ್ (Shashikant Hiremath) ಪ್ರತಿಭೆಯನ್ನು ಗುರುತಿಸಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಫ್ಲಾವಿಯಾ ಪಾಯಸ್ ಅವರು ತರಬೇತುಗೊಳಿಸಿದ್ದಾರೆ. ಅಲ್ಲದೇ ಕೋಚ್ ಬಾಲಕೃಷ್ಣ ಅವರ ಮೂಲಕ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ತರಬೇತಿಯನ್ನು ಕೊಡಿಸಿದ್ದಾರೆ.
ಇದನ್ನೂ ಓದಿ : TPL 2025 : ಶುರುವಾಯ್ತು ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ -2025 : ಟಿಪಿಎಲ್ ಕಂಪ್ಲೀಟ್ ಡಿಟೇಲ್ಸ್
ಸತತ ತರಬೇತಿಯ ಜೊತೆಗೆ ಪರಿಶ್ರಮದಿಂದಾಗಿ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಶಿಕಾಂತ್ ಹಿರೇಮಠ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಈ ಹಿಂದೆ ಮಂಗಳೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್ ಹಾಗೂ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಪ್ರಸ್ತುತ ಬ್ರಹ್ಮಾವರದಲ್ಲಿ ನಡೆದ ರಾಜ್ಯಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕುಲಶೇಖರ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಂ. ಭಗಿನಿ ಸಿಂತಿಯಾ ಡಿಕುನ್ಹಾ, ಶಾಲಾ ಸಂಚಾಲಕಿ ವಂ. ಭಗಿನಿ ಜುಲಿಯಾನ ಮೋನಿಸ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Mangalore Kulshekar Sacred Heart High School Student Shashikant Hiremath selected for the Indian national level Special Athletics