Prayagraj Maha Kumbh Mela : ಹಿಂದೂಗಳ ಮಹಾಸಂಗಮಕ್ಕೆ ಸಾಕ್ಷಿಯಾಗಿದ್ದ ಮಹಾಕುಂಭ ಮೇಳಕ್ಕೆ ತೆರೆಬಿದ್ದಿದೆ. ಯೋಗಿ ಆದಿತ್ಯನಾಥ್ ಜೀ ಸಾರಥ್ಯದಲ್ಲಿ ನಡೆದ ಮಹಾಕುಂಭ ವಿಶ್ವದಾಖಲೆಯನ್ನೇ ಬರೆದಿದೆ. ವಿರೋಧಿಗಳ ಟೀಕೆಯ ನಡುವಲ್ಲೇ ಸರಕಾರದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ ಹಿಂದೂಗಳ ಒಗ್ಗಟ್ಟು.
ಜಗತ್ತು ಕಂಡ ಅತ್ಯಂತ ದೊಡ್ಡ ಉತ್ಸವ, ಭಕ್ತಿ, ಅಧ್ಯಾತ್ಮ, ನಂಬಿಕೆ, ಶ್ರದ್ಧೆ, ತಂತ್ರಜ್ಞಾನದ ಮಹಾ ಸಂಗಮವೇ ಮಹಾಕುಂಭ ಮೇಳ. ಮಹಾಶಿವರಾತ್ರಿಯ ದಿನದಂದು 45 ದಿನಗಳಿಂದಲೂ ನಡೆದ ಮಹಾಕುಂಭಕ್ಕೆ ತೆರೆಬಿದ್ದಿದೆ.
ವಿಶ್ವದ ಆಕರ್ಷಣೆಯ ಕೇಂದ್ರವಾಗಿದ್ದ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಾತ್ರವಲ್ಲ ವಿಶ್ವದಾಖಲೆಯನ್ನು ಬರೆದಿದೆ. ಜನವರಿ 13ರ ಮಕರಸಂಕ್ರಾಂತಿಯ ಪುಣ್ಯದಿನದ ಹೊತ್ತಲೇ ಆರಂಭಗೊಂಡು ಶಿವರಾತ್ರಿಯ ಮಹಾ ಪರ್ವದ ವರೆಗೂ ಮಹಾಕುಂಭ ಯಶಸ್ವಿಯಾಗಿ ನಡೆದಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆದ ಮಹಾಕುಂಭ ಮೇಳದಲ್ಲಿ (Prayagraj Maha Kumbh Mela) ಬರೋಬ್ಬರಿ 66 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ. ಭಾರತದ ಪವಿತ್ರ ನದಿಗಳಾಗಿರುವ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿಯ ಪವಿತ್ರ ಸಂಗಮದಲ್ಲಿ ಕೋಟ್ಯಾಂತರ ಭಕ್ತರು ಮಿಂದೆದ್ದು ಜೀವನದ ಸಾರ್ಥಕತೆ ಪಡೆದುಕೊಂಡಿದ್ದಾರೆ.
Also Read : 48 ಗಂಟೆಯಲ್ಲೇ 53 ಮಂದಿ ಸಾವು : ಕೋವಿಡ್-19 ಬೆನ್ನಲ್ಲೇ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆ
ಟೀಕೆ, ವಿರೋಧ, ಆರೋಪಗಳ ನಡುವಲ್ಲೇ ಜನರ ಭಾವನೆಯನ್ನು ಬೆಸೆಯುವಲ್ಲಿ ಮಹಾಕುಂಭ ಯಶಸ್ವಿಯಾಗಿದೆ. ಮಾತ್ರವಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ನಡೆದಿದ್ದ ಹಿಂದೂಗಳ ಮಹಾ ಉತ್ಸವ ಇಂದು ಹಿಂದೂಗಳನ್ನು ಭಾವನಾತ್ಮಕವಾಗಿ ಒಂದು ಗೂಡಿಸಿದೆ.
ಗಂಗಾನದಿಯ ಪಾವಿತ್ರತೆ, ಮಹಾಕುಂಭದ ಆಯೋಜನೆ, ಅಮೃತಸ್ನಾನದ ಕುರಿತು ಅಪಹಾಸ್ಯ ಮಾಡಿದವರು ಇಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ಹಿಂದೂಗಳ ಒಗ್ಗಟ್ಟು. ಕುಂಭಮೇಳದ ಮೂಲದ ಬಗ್ಗೆ ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ.

ಸಮುದ್ರ ಮಂಥನದಲ್ಲಿ. ದೇವತೆಗಳು ಮತ್ತು ಅಸುರರು ಅಮರತ್ವವನ್ನು ಪಡೆಯಲು ವಾಸುಕಿಯನ್ನು ಕಡೆಗೋಲಾಗಿಸಿಕೊಂಡು ಸಮುದ್ರ ಮಂಥನ ನಡೆಸುತ್ತಾರೆ. ಮಂಥನವು ಆರಂಭಗೊಂಡ ನಂತರ ಅಮೃತದಿಂದ ತುಂಬಿದ ಕುಂಭ ಹೊರಹೊಮ್ಮಿತು.
ರಾಕ್ಷಸರಿಂದ ಅದನ್ನು ರಕ್ಷಿಸಲು, ಮೋಹಿನಿಯ ವೇಷದಲ್ಲಿರುವ ಭಗವಾನ್ ವಿಷ್ಣುವು ಮಡಿಕೆಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಾನೆ. ಈ ರೀತಿ ವಶಪಡಿಸಿಕೊಂಡ ಮಡಕೆಯನ್ನು ಕೊಂಡೊಯ್ಯುವ ವೇಳೆಯಲ್ಲಿ ಅಮೃತದ ಹಲವಾರು ಹನಿಗಳು ಬಿದ್ದ ನಾಲ್ಕು ಸ್ಥಳಗಳೇ ಇಂದಿನ ಪ್ರಯಾಗರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಕ್ಷೇತ್ರಗಳಾಗಿವೆ
ಸ್ಥಳಗಳನ್ನು ಇಂದಿಗೂ ಪವಿತ್ರ ಸ್ಥಳಗಳಾಗಿ ಪೂಜಿಸಲ್ಪಡುತ್ತಿವೆ. ಇದೇ ಕಾರಣದಿಂದಲೇ ಇಲ್ಲಿ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಮಹಾಕುಂಭ ಮೇಳ ಅನಾಧಿ ಕಾಲದಿಂದಲೂ ಆಚರಣೆಯಲ್ಲಿದೆ. ಸಾವಿರಾರು ವರ್ಷಗಳಿಂದಲೂ ಕುಂಭಮೇಳದ ಪರಂಪರೆ ನಡೆದುಕೊಂಡು ಬಂದಿದೆ.
ಮಹಾಕುಂಭ ಮೇಳದಲ್ಲಿ ಈ ಬಾರಿ ಪರಂಪರೆಯ ಜೊತೆಗೆ ಆಧುನಿಕ ಸ್ಪರ್ಷ ನೀಡಲಾಗಿದೆ. ಮಹಾಕುಂಭಕ್ಕ ಬರುವ ಭಕ್ತರ ರಕ್ಷಣೆಗಾಗಿಯೇ ದಿನದ 24 ಗಂಟೆ ಕಾರ್ಯನಿರ್ವಹಿಸುವ ಡ್ರೋನ್ ವ್ಯವಸ್ಥೆ, ಕೃತಕ ಬುದ್ಧಿಮತ್ತೆ (ಎಐ) ಆಧರಿತ ಕ್ಯಾಮೆರಾಗಳ ಅಳವಡಿಕೆ ಗಮನ ಸೆಳೆದಿದೆ.
Also Read : ಗೃಹಲಕ್ಷ್ಮೀ, ಶಕ್ತಿ ಯೋಜನೆ , ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್ ..!
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆದ ಮಹಾಕುಂಭದ ಆಯೋಜನೆ ಸಾಮಾನ್ಯದ ಕೆಲಸವಲ್ಲ. ಮಹಾಕುಂಭಕ್ಕೆ ಬರುವ ಕೋಟ್ಯಾಂತರ ಭಕ್ತರಿಗೆ ವಸತಿ, ಊಟ, ರಸ್ತೆ ವ್ಯವಸ್ಥೆ, ಅಮೃತ ಸ್ನಾನಕ್ಕೆ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ದೊಡ್ಡ ಸವಾಲಿನ ಕೆಲಸವಾಗಿತ್ತು.

ಮಹಾಕುಂಭ ಮೇಳದಲ್ಲಿ ಭದ್ರತೆಗಾಗಿ ವಿಶೇಷ ಪಡೆಯನ್ನು ನಿಯೋಜಿಸಲಾಗಿತ್ತು. 37,000 ಪೊಲೀಸರು, 14,000 ಗೃಹರಕ್ಷಕರು, 2,750 AI ಆಧರಿತ ಸಿಸಿಟಿವಿಗಳು, 50 ಅಗ್ನಿಶಾಮಕ ಠಾಣೆಗಳು, 3 ಜಲ ಪೊಲೀಸ್ ಠಾಣೆಗಳು, 18 ಜಲ ಪೊಲೀಸ್ ನಿಯಂತ್ರಣ ಕೊಠಡಿಗಳು ಹಾಗೂ 50 ಕಾವಲು ಗೋಪುರಗಳನ್ನು ಮಹಾಕುಂಭದ ಆದಿಯಿಂದ ಅಂತ್ಯದ ವರೆಗೂ ನಿಯೋಜನೆ ಮಾಡಲಾಗಿತ್ತು.
144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದ ಸಂಭ್ರಮ ಮುಗಿದಿದೆ. ಅಘೋರಿಗಳು, ನಾಗಾಸಾಧುಗಳು, ಸನ್ಯಾಸಿಗಳು, ಸಾಧ್ವಿಯರು, ವ್ಯಾಪಾರಸ್ಥರು, ವರ್ತಕರು, ಕಲಾವಿದರು ಪ್ರಯಾಗ್‌ರಾಜ್ ತೊರೆದಿದ್ದಾರೆ.
ಶತಮಾನಗಳ ಬಳಿಕ ನಡೆದ ಮಹಾಕುಂಭ ಮೇಳ ಕಟ್ಟಿಕೊಟ್ಟಿರುವ ನೆನಪನ್ನು ಮರೆಯೋದಕ್ಕೆ ಮಾತ್ರ ಸಾಧ್ಯವೇ ಇಲ್ಲ. ಇದೇ ಮೊದಲ ಬಾರಿಗೆ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದರು.
ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ಈ ಬಾರಿ ಉತ್ತರ ಪ್ರದೇಶ ಸರಕಾರ ಸುಮಾರು 35 ರಿಂದ 40 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದ್ರೆ ಸರಕಾರದ ಲೆಕ್ಕಾಚಾರವನ್ನೇ ಮಹಾಕುಂಭ ಮೇಳ ತಲೆಕೆಳಗಾಗುವಂತೆ ಮಾಡಿದೆ.
Prayagraj Maha Kumbh Mela : 66 ಕೋಟಿಗೂ ಅಧಿಕ ಭಕ್ತರಿಂದ ಅಮೃತಸ್ನಾನ
ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಸೆಲೆಬ್ರಿಟಿಗಳು ಸೇರಿದಂತೆ ಕೋಟ್ಯಾಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಅದ್ರಲ್ಲೂ ಶಿವರಾತ್ರಿಯ ಪುಣ್ಯದಿನದಂದು ಬರೋಬ್ಬರಿ 1 ಕೋಟಿ 53 ಲಕ್ಷ ಮಂದಿ ಪವಿತ್ರಸ್ನಾನ ಮಾಡುವ ಮೂಲಕ ಹೊಸ ದಾಖಲೆಯನ್ನೇ ಬರೆದಿದ್ದಾರೆ.
144 ವರ್ಷಗಳ ನಂತರ ನಡೆದ ಮಹಾಕುಂಭ ಮೇಳದಲ್ಲಿ ಈ ಬಾರಿ 66 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಅಂತಾ ಸರಕಾರದ ಅಂಕಿಅಂಶಗಳು ಹೇಳುತ್ತಿವೆ. ಕಳೆದ 45 ದಿನಗಳ ಹಿಂದೆ ಪ್ರಯಾಗ್‌ರಾಜ್‌ನಲ್ಲಿ ಆರಂಭಗೊಂಡಿದ್ದ ಮಹಾಕುಂಭ ಮೇಳಕ್ಕೆ ಮಹಾಶಿವರಾತ್ರಿಯ ದಿನದಂದು ತೆರೆಬಿದ್ದಿದೆ.
ಪ್ರಯಾಗರಾಜ್‌ಗೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಪ್ರತೀ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತೆ. ಮುಂದಿನ ಕುಂಭಮೇಳ 2027ರಲ್ಲಿ ನಾಸಿಕ್‌ನಲ್ಲಿ ನಡೆಯಲಿದೆ. ಪ್ರಯಾಗ್ ರಾಜ್, ಹರಿದ್ವಾರ, ಉಜ್ಜಯನಿ ಹಾಗೂ ನಾಸಿಕ್ ಸೇರಿದಂತೆ ದೇಶದಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ಕುಂಭಮೇಳ ಆಯೋಜಿಸಲಾಗುತ್ತದೆ.
ಕಳೆದ 12 ವರ್ಷಗಳ ಹಿಂದೆ ನಾಸಿಕ್‌ನಲ್ಲಿ ಪೂರ್ಣ ಕುಂಭಮೇಳ ನಡೆದಿತ್ತು. ನಾಸಿಕ್ ನಂತರ ಗೋದಾವರಿ ನದಿ ತೀರದಲ್ಲಿ ಕುಂಭ ಮೇಳ ನಡೆಯಲಿದೆ. ಕುಂಭಮೇಳ ಪ್ರತೀ 4 ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭ ಮೇಳವು ಹರಿದ್ವಾರ, ಪ್ರಯಾಗ್ ರಾಜ್, ಉಜ್ಜಯನಿ ಹಾಗೂ ನಾಸಿಕ್‌ನಲ್ಲಿ ನಡೆಯುತ್ತದೆ. ಈ ವೇಳೆಯಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಜನರು ಮುಂದೇಳುತ್ತಾರೆ.
ಅರ್ದ ಕುಂಭಮೇಳವು ಪ್ರತೀ 6 ವರ್ಷಗಳಿಗೊಮ್ಮ ನಡೆಯಲಿದೆ. ಪ್ರಯಾಗ್‌ರಾಜ್ ಮತ್ತು ಹರಿದ್ವಾರದಲ್ಲಿ ಮಾತ್ರವೇ ಈ ಅರ್ಧಕುಂಭ ಮೇಳವನ್ನು ಆಯೋಜಿಸಲಾಗುತ್ತದೆ. ಇನ್ನು ಪೂರ್ಣ ಕುಂಭಮೇಳವು ಪ್ರತೀ 12 ವರ್ಷಗಳಿಗೆ ಒಮ್ಮೆ ಮಾತ್ರವೇ ನಡೆಯುತ್ತದೆ.
ಈ ಪೂರ್ಣ ಕುಂಭ ಮೇಳ ಪ್ರಯಾಗ್‌ರಾಜ್‌ನಲ್ಲಿ ಮಾತ್ರವೇ ನಡೆಯಲಿದ್ದು, ಗ್ರಹಗಳ ಶುಭ ಜೋಡಣೆಯ ಮೂಲಕ ದಿನಾಂಕವನ್ನು ನಿರ್ಧಾರ ಮಾಡಲಾಗುತ್ತದೆ. ಇನ್ನು ಮಹಾಕುಂಭ ಮೇಳವನ್ನು ಬರೋಬ್ಬರಿ 144 ವರ್ಷಗಳಿಗೊಮ್ಮೆ ಮಾತ್ರವೇ ಆಯೊಜಿಸಲಾಗುತ್ತದೆ.
ಮಹಾಕುಂಭ ಮೇಳ ಅತ್ಯಂತ ಪವಿತ್ರವಾದುದು, ಪ್ರಯಾಗ್ ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಾತ್ರವೇ ಈ ಮಹಾಕುಂಭ ಮೇಳ ನಡೆಯಲಿದೆ. ಮಹಾಕುಂಭ ಮೇಳದಲ್ಲಿನ ಅಮೃತ ಸ್ನಾನಕ್ಕೆ ವಿಶೇಷ ಸ್ಥಾನವಿದೆ. ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಪವಿತ್ರಸ್ನಾನ ಮಾಡಿದವರೇ ನಿಜಕ್ಕೂ ಪುಣ್ಯವಂತರು.
ಮುಂದಿನ ಮಹಾಕುಂಭ ಮೇಳವನ್ನು ನೋಡುವುದಕ್ಕೆ ನಾವು ಬದುಕಿ ಇರುವುದಕ್ಕೆ ಸಾಧ್ಯವಿಲ್ಲ. ವಿಶ್ವದ ಅತಿದೊಡ್ಡ ಧಾರ್ಮಿಕ ಹಬ್ಬವನ್ನು ಕಣ್ತುಂಬಿಕೊಂಡ ನಾವೆಲ್ಲರೂ ಭಾಗ್ಯಶಾಲಿಗಳು.
Prayagraj Maha Kumbh Mela World Record 66 crore devotees 4 lakh crore revenue