ಉಡುಪಿ : ವದ್ದೆಯೋರ್ವರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಜನರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಎಸ್ಐ ಆಟೋ ಚಾಲಕನೊಂದಿಗೆ ಬಾವಿಗಳಿದು ಅಜ್ಜಿಯನ್ನು ರಕ್ಷಿಸಿದ್ದಾರೆ. ಈ ಘಟನೆ ನಡೆದಿರೋದು ಉಡುಪಿಯಲ್ಲಿ.

ಹೌದು, ಉಡುಪಿ ನಗರದ ಕುಕ್ಕಿಕಟ್ಟೆಯಲ್ಲಿ ವೃದ್ದೆಯೋರ್ವರು ಮನೆಯ ಬಾವಿಗೆ ಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಉಡುಪಿ ನಗರ ಠಾಣೆಯ ಪಿಎಸ್ ಐ ಸದಾಶಿವ ರಾಗವರೋಜಿ ಅವರು ತಮ್ಮ ಸಿಬ್ಬಂದಿಗಳ ಜೊತೆಗೆ ಸ್ಥಳಕ್ಕೆ ಬಂದಿದ್ದಾರೆ. ಅದೇ ಹೊತ್ತಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದರು. ಆದರೆ ಅಗ್ನಿಶಾಮಕ ಸಿಬ್ಬಂದಿ ಬಾವಿಗಿಳಿದು ಅಜ್ಜಿಯ ರಕ್ಷಣೆಗೆ ಸಿದ್ದತೆ ಮಾಡುತ್ತಿದ್ದರು. ಆದರೆ ತಡಮಾಡದ ಪಿಎಸ್ಐ ಸದಾಶಿವ ಅವರು ಪೊಲೀಸ್ ಸಮವಸ್ತ್ರದಲ್ಲಿಯೇ ಬಾವಿಗೆ ಇಳಿದಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ಕೂಡಲೇ ಬಾವಿಗಿಳಿದರು.
ಪೊಲೀಸ್ ಕೆಲಸಕ್ಕೆ ಸೇರಿದ ಮೇಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆ ಸಾರ್ವಜನಿಕ ರಕ್ಷಣೆ ಕೂಡಾ ನಮ್ಮ ಹೊಣೆ. ಅಸಾಹಯಕ ಸ್ಥಿತಿಯಲ್ಲಿ ಜೀವ ಉಳಿಸಲು ಬಾವಿಗಿಳಿದೆ. ಜೊತೆಗಿದ್ದ ಇಬ್ಬರ ಸಹಾಯದಿಂದ ರಕ್ಷಣೆ ಸಾಧ್ಯ ಆಗಿದೆ ಎಂದು ಸದಾಶಿವ ಗವರೋಜಿ ತಿಳಿಸಿದ್ದಾರೆ.

ತುರ್ತು ಜೀವರಕ್ಷಣೆ ಕಾರ್ಯಚರಣೆಯಲ್ಲಿ ಸಾಹಸ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.

ಮಾತ್ರವಲ್ಲ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಅಭಿನಂದನೆ ಸಲ್ಲಿಸಿದ್ದಾರೆ.