ಚಿಕ್ಕಮಗಳೂರು : ಜಿಮ್ ಟ್ರೈನರ್ ಓರ್ವ ತನ್ನ ಜಿಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.

ಸುನಿಲ್ (26 ವರ್ಷ) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ಜಿಮ್ ಟ್ರೈನರ್. ಜಯಪುರ ಪಟ್ಟಣದಲ್ಲಿ ಜಿಮ್ ಇಟ್ಟುಕೊಂಡಿದ್ದ ಸುನಿಲ್ ನಿತ್ಯವೂ ಸುಮಾರು 30 ರಿಂದ 40 ಮಂದಿಗೆ ಯುವಕರಿಗೆ ಜಿಮ್ ಟ್ರೈನಿಂಗ್ ನೀಡುತ್ತಿದ್ದ. ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿದೆಡೆಗಳಲ್ಲಿ ನಡೆಯುತ್ತಿದ್ದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಸುನಿಲ್ ಭಾಗವಹಿಸುತ್ತಿದ್ದ.

ಮಾತ್ರವಲ್ಲ ಕಳೆದ ವರ್ಷ ನಡೆದ ಮಿಸ್ಟರ್ ಕೊಪ್ಪ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಿಕೆಯಾದ ಲಾಕ್ ಡೌನ್ ನಿಂದಾಗಿ ಜಿಮ್ ಕ್ಲೋಸ್ ಮಾಡಲಾಗಿತ್ತು. ಇದರಿಂದಾಗಿ ಸುನಿಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಹೇಳಲಾಗುತ್ತಿದೆ.
ಜಿಮ್ ಕ್ಲೋಸ್ ಆಗಿದ್ದರಿಂದಾಗಿ ಕಳೆದ ಮೂರು ತಿಂಗಳಿನಿಂದಲೂ ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ. ಅದರೆ ಆರ್ಥಿಕ ಸಂಕಷ್ಟದಿಂದಾಗಿ ಸಾಕಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇದೇ ಕಾರಣಕ್ಕೆ ಸುನಿಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಘಟನಾ ಸ್ಥಲಕ್ಕೆ ಜಯಪುರ ಠಾಣೆಯ ಪೊಲೀಸರು ಭೇಟಿಕೊಟ್ಟಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.