ಕುಂದಾಪುರ : ದೇವರ ಪಾತ್ರಿಯಾಗಲು ಅವಕಾಶ ನೀಡದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಕುಂದಾಪುರದ ಖಾರ್ವಿಕೇರಿಯ ದಾಕಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ(34) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಗಂಗೊಳ್ಳಿ ಖಾರ್ವಿಕೇರಿಯ ಮಹಮ್ಮಾಯಿ ಮಹಾಸತಿ ದೇವಸ್ಥಾನದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆಯಲ್ಲಿ ದೇವಸ್ಥಾನದೊಳಗೆ ನುಗ್ಗಿದ್ದ ರಾಘವೇಂದ್ರ ಖಾರ್ವಿ ಏಕಾಏಕಿಯಾಗಿ ಮೈ ಮೇಲೆ ಪೆಟ್ರೋಲ್ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಖಾರ್ವಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ದೇವಸ್ಥಾನದಲ್ಲಿ ರಾಘವೇಂದ್ರ ಖಾರ್ವಿ ಪಾತ್ರಿಯಾಗಲು ಇಚ್ಚಿಸಿದ್ದ, ಆದರೆ ದೇವಸ್ಥಾನದವರು ಇದಕ್ಕೆ ಅವಕಾಶವನ್ನು ನೀಡಿರಲಿಲ್ಲ. ಇದರಿಂದಾಗಿಯೇ ನೊಂದ ರಾಘವೇಂದ್ರ ಈ ಕೃತ್ಯವನ್ನೆಸಗಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ರಾಘವೇಂದ್ರ ಖಾರ್ವಿಯ ರಕ್ಷಣೆಗೆ ಬಂದ ಜನಾರ್ಧನ ಹಾಗೂ ಲಕ್ಷ್ಮಣ ಖಾರ್ವಿ ಅವರಿಗೂ ಬೆಂಕಿ ತಗುಲಿ ಗಾಯವಾಗಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.