ಕುವೈಟ್ : ಅನಾರೋಗ್ಯದ ಹಿನ್ನೆಲೆಯಲ್ಲಿ ಕುವೈತ್ ದೊರೆ ಎಮಿರ್ ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ (91 ವರ್ಷ ) ವಿಧಿವಶರಾಗಿದ್ದಾರೆ. ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ಸ್ನ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಶೇಖ್ ಸಬಾ ಅವರನ್ನು ಜುಲೈ ತಿಂಗಳಿನಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 1929 ರಲ್ಲಿ ಜನಿಸಿದ ಶೇಖ್ ಸಬಾ ಅವರು ಆಧುನಿಕ ಕುವೈತ್ನ ವಿದೇಶಾಂಗ ನೀತಿಯ ವಾಸ್ತುಶಿಲ್ಪಿ ಎಂದು ಖ್ಯಾತಿ ಪಡೆದಿದ್ದರು. ಶೇಖ್ ಆಗುವ ಮೊದಲು 1963ರಿಂದ 2003ರ ತನಕ ಸುಮಾರು 40 ವರ್ಷಗಳ ಕಾಲ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಶೇಖ್ ಜಬೆರ್ ಅಲ್-ಅಹ್ಮದ್ ಅಲ್-ಸಬಾ ಅವರ ನಿಧನದ ನಂತರದಲ್ಲಿ ಶೇಖ್ ಸಬಾ ಅವರು 2006ರಲ್ಲಿ ಕುವೈತ್ ದೊರೆಯಾಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದೆ ಶೇಖ್ ಸಬಾ ಅವರ ಮಗಳು ಸಾಲ್ವಾ ಕ್ಯಾನ್ಸರ್ ಗೆ ಬಲಿಯಾದ ನಂತರದಲ್ಲಿ ಮಗಳ ನೆನಪಲ್ಲಿ ಕಟ್ಟಿಸಿದ್ದ ಅರಮನೆಯಲ್ಲಿಯೇ ವಾಸವಾಗಿದ್ದರು. ಶೇಖ್ ಸಬಾ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಶೇಖ್ ಸಬಾ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ರಾಯಲ್ ವ್ಯವಹಾರಗಳ ಉಸ್ತುವಾರಿ ಸಚಿವ ಶೇಖ್ ಅಲಿ ಜರ್ರಾ ಅಲ್-ಸಬಾ ಅವರು, ಕುವೈತ್ ರಾಜ್ಯದ ಎಮಿರ್ ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಅವರ ನಿಧನರಾಗಿದ್ದು, ಅವರ ನಿಧನಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ. ಶೇಖ್ ಸಬಾ ಅವರ ಸಾವು ಬಹಳ ದುಃಖ ತಂದಿದೆ ಎಂದಿದ್ದಾರೆ.