ಬೆಂಗಳೂರು : ಹೆಮ್ಮಾರಿ ಕೊರೊನಾ ಆರ್ಭಟ ದಿನೇ ದಿನೇ ಹೆಚ್ಚುತ್ತಿದೆ. ರಾಜ್ಯದಲ್ಲಿ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದಂತೆಯೇ ರಾಜ್ಯ ಸರಕಾರ ಮಾಸ್ಕ್ ಧರಿಸದಿರುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದವರ ವಿರುದ್ದ ಕಠಿಣ ಕ್ರಮಕ್ಕೆ ಕೈಗೊಳ್ಳಲಿದೆ. ಮಾಸ್ಕ್ ಧರಿಸದೇ ಮನೆಯಿಂದ ಹೊರ ಬರುವವರಿಂದ ದುಬಾರಿ ದಂಡ ವಸೂಲಿಗೆ ಮುಂದಾಗಿದೆ.

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸದ್ಯಕ್ಕಿರುವ ಮಾರ್ಗ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡುವುದು. ಆದರೆ ರಾಜ್ಯದಲ್ಲಿ ಬಹುತೇಕ ಜನರು ಮಾಸ್ಕ್ ಧರಿಸುತ್ತಿಲ್ಲ. ಅಷ್ಟೇ ಅಲ್ಲಾ ಸಾಮಾಜಿಕ ಅಂತರವನ್ನೂ ಪಾಲನೆ ಮಾಡುತ್ತಿಲ್ಲ. ಹೀಗೆ ನಿರ್ಲಕ್ಷ್ಯವಹಿಸುವವರಿಗೆ ರಾಜ್ಯ ಸರಕಾರ ಚಾಟಿ ಬೀಸಿದೆ.

ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸುವವರಿಗೆ ಮೊದಲ ಬಾರಿಗೆ 1000 ರೂ. ದಂಡ, 3 ನೇ ಬಾರಿ ಸಿಕ್ಕಿಬಿದ್ದರೆ 1000 ರೂ. ದಂಡದ ಜೊತೆಗೆ 1 ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಚರ್ಚಿಸಲಿದ್ದು, ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಡಿ.ಸುಧಾಕರ್ ಅವರು, ಅನ್ ಲಾಕ್ ನಂತರದಲ್ಲಿ ಕೊಒರನಾ ವೈರಸ್ ಸೋಂಕು ಹೆಚ್ಚಳವಾಗಿದೆ. ಕೊರೊನಾ ಬಗ್ಗೆ ರಾಜ್ಯ ಸರಕಾರ ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಸಾರ್ವಜನಿಕರು ನಿಯಮ ಪಾಲನೆ ಮಾಡದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಠಿಣ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರಲಾಗುತ್ತದೆ ಎಂದಿದ್ದಾರೆ.