ಹೈದ್ರಾಬಾದ್ : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲಾರಂಭ ಮಾಡಿದ್ದ ಆಂಧ್ರ ಸರಕಾರಕ್ಕೆ ಕೊರೊನಾ ಹೆಮ್ಮಾರಿ ಎರಡೇ ದಿನಕ್ಕೆ ಭರ್ಜರಿ ಶಾಕ್ ಕೊಟ್ಟಿದೆ. ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, 260 ವಿದ್ಯಾರ್ಥಿಗಳು ಹಾಗೂ 160 ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅನ್ ಲಾಕ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ಆಂಧ್ರಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ಆರಂಭಿಸಿದೆ. ಶಾಲಾರಂಭದ ದಿನವೇ ಸುಮಾರು 65 ಕ್ಕೂ ಅಧಿಕ ಮಂದಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಸೋಂಕು ಎರಡನೇ ದಿನ ಭರ್ಜರಿ ಶಾಕ್ ಕೊಟ್ಟಿದೆ. ಶಾಲಾರಂಭವಾಗುತ್ತಿದ್ದಂತೆಯೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಎರಡನೇ ದಿನ ರಾಜ್ಯದಲ್ಲಿ ಒಟ್ಟು 262 ವಿದ್ಯಾರ್ಥಿಗಳು, 160 ಶಿಕ್ಷಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕವನ್ನು ಮೂಡಿಸಿದೆ.

ಅಲ್ಲದೇ ದಿನೇ ದಿನೇ ಸೋಂಕಿತರ ಒಟ್ಟು 4 ಲಕ್ಷ ವಿದ್ಯಾರ್ಥಿಗಳು ಹಾಗೂ 99 ಸಾವಿರ ಶಿಕ್ಷಕರು ಹಾಜರಾಗಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿರುವಾಗ ಕೊರೊನಾ ಪತ್ತೆಯಾಗಿರುವ ಪ್ರಮಾಣ ಅಷ್ಟೊಂದು ಆತಂಕಕಾರಿಯಲ್ಲ ಎಂದು ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ಚಿನ್ನ ವೀರಭದ್ರಡು ತಿಳಿಸಿದ್ದಾರೆ. ಆದರೆ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆಯೂ ಇದೆ.

ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಿಕ್ಷಕರು ಕೂಡ ಸುರಕ್ಷಿತ ಕ್ರಮಗಳನ್ನು ಅನುಸರಿಸಿದ್ದಾರೆ. ಶಾಲೆಯಲ್ಲಿ ಸಾಮಾಜಿಕ ಅಂತರವನ್ನು ಪಾಲನೆ ಮಾಡಲಾಗುತ್ತಿದ್ದು, ಪ್ರತೀ ತರಗತಿಯಲ್ಲಿಯೂ ಕೇವಲ 15 ರಿಂದ 16 ವಿದ್ಯಾರ್ಥಿಗಳಿಗೆ ಮಾತ್ರವೇ ಕುಳಿತುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದಿದ್ದಾರೆ.

ಆಂಧ್ರಪ್ರದೇಶದಲ್ಲಿ 2020-21ನ ಸಾಲಿನ ಶೈಕ್ಷಣಿಕ ವರ್ಷದಲ್ಲಿ 9 ಮತ್ತು 10ನೇ ತರಗತಿಗಳಿಗೆ ಒಟ್ಟು 9.75 ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಂಡಿದ್ದರು. ಆದರೆ ಶಾಲಾರಂಭವಾಗಿ ಮೂರು ದಿನಗಳು ಕಳೆದರೂ ಕೂಡ ವಿದ್ಯಾರ್ಥಿಗಳ ಹಾಜರಾತಿಯ ಸಂಖ್ಯೆ ಕೇವಲ 4 ಲಕ್ಷ ಮಾತ್ರ. ಉಳಿದಂತೆ ಅರ್ಧಕ್ಕಿಂತಲೂ ಅಧಿಕ ಅಂದ್ರೆ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕಿದ್ದಾರೆ.

ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರು ಕೂಡ ಶೇ.100 ಹಾಜರಾತಿ ಕಂಡು ಬಂದಿಲ್ಲ. ಆಂಧ್ರಪ್ರದೇಶ ದಲ್ಲಿ ಒಟ್ಟು 1.11 ಲಕ್ಷ ಮಂದಿ ಶಿಕ್ಷಕರಿದ್ದು, ಈ ಪೈಕಿ 99 ಸಾವಿರ ಶಿಕ್ಷಕರು ಮಾತ್ರವೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಅಂತಾ ಶಿಕ್ಷಣ ಇಲಾಖೆ ಮಾಹಿತಿಯನ್ನು ನೀಡಿದೆ.
ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದರೂ ಕೂಡ ಆಂಧ್ರಪ್ರದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ನಡುವಲ್ಲೇ ಶಾಲಾರಂಭ ಮಾಡಿದ್ದು, ಸೋಂಕು ಹೆಚ್ಚಳವಾಗುತ್ತಿರೋದು ಸರಕಾರಕ್ಕೆ ತಲೆನೋವು ತರಿಸಿದೆ. ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರ ಮೇಲೆಯೂ ನಿಗಾ ಇರಿಸಲಾಗುತ್ತಿದೆ. ಪ್ರತೀ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನೂ ಕೂಡ ಕೊರೊನಾ ತಪಾಸಣೆಗೆ ಒಳಪಡಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.