ಚಾಮರಾಜನಗರ : ರಾಜ್ಯದಾದ್ಯಂತ ಜನವರಿ 1ರಿಂದ ಶಾಲಾರಂಭದ ಜೊತೆಗೆ ವಿದ್ಯಾಗಮ ಯೋಜನೆಯನ್ನು ಆರಂಭಿಸಲಾಗುತ್ತಿದೆ. ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವಲ್ಲೇ ಕೊರೊನಾ ವೈರಸ್ ಶಾಕ್ ನೀಡಿದೆ. ಒಂದೇ ಶಾಲೆ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಒಕ್ಕರಿಸಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೋಲಿ ಕ್ರಾಸ್ ನರ್ಸಿಂಗ್ ಸ್ಕೂಲ್ನ 15 ವಿದ್ಯಾರ್ಥಿಗಳಿಗೆ ಇದೀಗ ಕೊರೊನಾ ಸೋಂಕು ತಗುಲಿದೆ.ವಿದ್ಯಾರ್ಥಿಗಳಿಗೆ ನೆಗಡಿ, ತಲೆನೋವು, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ವಿದ್ಯಾರ್ಥಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊರೊನಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ಶಾಲೆಗೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳು ಒಂದೇ ಕಡೆ ಇದ್ದಿದ್ದರಿಂದ ಕೊರೊನಾ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಆದರೆ ರೋಗ ಲಕ್ಷಣಗಳು ಇತರರಲ್ಲಿ ಕಾಣಿಸಿಕೊಂಡಿಲ್ಲ. ಕೊರೊನಾ ಸೋಂಕಿತರು ಮಾತ್ರವಲ್ಲದೇ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಕೂಡ ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ನರ್ಸಿಂಗ್ ಕಾಲೇಜು ಹಾಗೂ ಆಸ್ಪತ್ರೆಯನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆಂದು ಡಿಹೆಚ್ಓ ಡಾ. ರವಿ ತಿಳಿಸಿದ್ದಾರೆ.