ಬೆಂಗಳೂರು : ಅಧಿಕ ಬಡ್ಡಿ ನೀಡಿಲ್ಲವೆಂಬ ಕಾರಣಕ್ಕೆ ವಾಟ್ಸಾಪ್ ನಲ್ಲಿ ವ್ಯಕ್ತಿಯೋರ್ವರನ್ನು ತೇಜೋವಧೆ ಮಾಡಲಾಗಿದೆ ಎಂಬ ಆರೋಪ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ದ ಕೇಳಿಬಂದಿದೆ. ಮಾತ್ರವಲ್ಲ ವ್ಯಕ್ತಿಯೋರ್ವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಿವಾಸಿಯಾಗಿರುವ ವೈ.ಕೆ. ದೇವನಾಥ್ ಎಂಬವರು ಪ್ರಶಾಂತ್ ಸಂಬರಗಿ ಬಳಿಯಲ್ಲಿ ಸಾಲ ಪಡೆದಿದ್ದಾರೆ. ಸಾಲ ಪಡೆಯುವ ವೇಳೆಯಲ್ಲಿ ಭದ್ರತೆಗಾಗಿ ಆಸ್ತಿ ಪತ್ರಗಳನ್ನು ಅಡವಿಟ್ಟಿದ್ದು, ಸಾಲದ ಹಣವನ್ನು ಬಡ್ಡಿ ಸಮೇತ ಪಾವತಿ ಮಾಡಿದ್ದರೂ ಕೂಡ ಆಸ್ತಿಯ ದಾಖಲಾತಿಗಳನ್ನು ನೀಡಿಲ್ಲ. ಅಲ್ಲದೇ ಆಸ್ತಿ ಪತ್ರಗಳನ್ನು ನೀಡಬೇಕಾದ್ರೆ ಶೇ.10ರಷ್ಟು ಬಡ್ಡಿ ಹಣವನ್ನು ನೀಡಬೇಕೆಂಬ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದೇ ಇದ್ರೆ ಸಿಸಿಬಿಯಲ್ಲಿ ದೂರು ದಾಖಲಿಸುವುದಾಗಿ ಬೆದರಿಕೆಯೊಡ್ಡಿ ದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ತನ್ನ ವಿರುದ್ದ ವಾಟ್ಸಾಪ್ ನಲ್ಲಿ ಮೋಸಗಾರ ಅಂತೆಲ್ಲಾ ಅವಹೇಳನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದಾರೆ. ನನ್ನ ವಿರುದ್ದ ಮಾನಹಾನಿಕರ ಸಂದೇಶಗಳನ್ನು ರವಾನಿಸಿರುವ ಪ್ರಶಾಂತ್ ಸಂಬರಗಿ ವಿರುದ್ದ ಕ್ರಮಕೈಗೊಳ್ಳಬೇಕೆಂದು ವೈ.ಕೆ.ದೇವನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೀಗ ದೂರು ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಶಾಂತ್ ಸಂಬರಗಿ ವಿರುದ್ದ ಸೆಕ್ಷನ್ 499, 500 ಹಾಗೂ ಐಟಿ ಕಾಯ್ದೆಯಡಿಯಲ್ಲಿ ಎಫ್ ಐಆರ್ ದಾಖಲು ಮಾಡಿದ್ದಾರೆ.