144 ದಿನಗಳ ಜೈಲುವಾಸದ ಬಳಿಕ ನಟಿ ರಾಗಿಣಿ ದ್ವಿವೇದಿ ಸೋಮವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಹೊರಬರುತ್ತಿದ್ದಂತೆ ಜೈಲಿನ ಬಳಿ ಇರುವ ಜಡೇಮುನೇಶ್ವರ್ ಸ್ವಾಮೀ ದೇವಾಲಯಕ್ಕೆ ತೆರಳಿದ ರಾಗಿಣಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಿಡುಗಡೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಗಿಣಿ, ಸತ್ಯ ಗೆಲ್ಲುತ್ತೆ ಅನ್ನೋದು ಇವತ್ತು ಸಾಬೀತಾಗಿದೆ. ಸತ್ಯಮೇವ ಜಯತೆ. ಸಧ್ಯದಲ್ಲೇ ನಾನೊಂದು ಸುದ್ದಿಗೋಷ್ಠಿಯ ಮೂಲಕ ನಿಮ್ಮ ಮುಂದೇ ಬರುತ್ತೇನೆ. ಸಾಕಷ್ಟು ಮಾತನಾಡೋದಿದೆ. ಸಧ್ಯಕ್ಕೆ ನನಗೆ ಒಂದಿಷ್ಟು ಸಮಯ ಕೊಡಿ. ಕುಟುಂಬದವರ ಜೊತೆ ಸಮಯ ಕಳೆದ ಬಳಿಕ ನಿಮ್ಮ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.

ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋದ ರಾಗಿಣಿಗೆ ಕಳೆದ ನಾಲ್ಕು ದಿನಗಳ ಹಿಂದೆ ಬೇಲ್ ಸಿಕ್ಕಿತ್ತು. ಆದರೆ ಶ್ಯೂರಿಟಿ ಕೊಡಲು ಯಾರು ಮುಂದೇ ಬಾರದ ಕಾರಣ ಹಾಗೂ ಕಾನೂನು ಪ್ರಕ್ರಿಯೆ ವಿಳಂಬಗೊಂಡ ಕಾರಣ ರಾಗಿಣಿ ಸೋಮವಾರದ ವರೆಗೂ ಜೈಲಿನಲ್ಲೇ ಕಳೆದಿದ್ದರು.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಹೆಸರು ಕೇಳಿಬಂದ ಕಾರಣ ಸಿಸಿಬಿ ಪೊಲೀಸರು ರಾಗಿಣಿ ನಿವಾಸದ ಮೇಲೆ ದಾಳಿ ನಡೆಸಿದ್ದು ಕೆಲ ಕಾಲ ವಿಚಾರಣೆ ನಡೆಸಿದ ಬಳಿಕ ರಾಗಿಣಿಯನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆ ಬಳಿಕ ನ್ಯಾಯಾಲಯ ರಾಗಿಣಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆ ಬಳಿಕ ತುಪ್ಪದ ಬೆಡಗಿ ರಾಗಿಣಿ ಹಲವಾರು ಭಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದೆಂಬ ಕಾರಣಕ್ಕೆ ಹಾಗೂ ಇತರ ಆರೋಪಿಗಳ ಬಂಧನಕ್ಕೆ ತಡೆಯಾಗಬಹುದೆಂಬ ಕಾರಣಕ್ಕೆ ನ್ಯಾಯಾಲಯ ಜಾಮೀನು ನೀಡಿರಲಿಲ್ಲ.

ಇನ್ನುಜೈಲಿನಿಂದ ರಾಗಿಣಿ ಹೊರಬರೋದಿಕ್ಕು ಮುನ್ನವೇ ರಾಗಿಣಿ ಪೋಷಕರು ಜೈಲಿನ ಬಳಿ ಹಾಜರಿದ್ದು ಮಗಳನ್ನು ಮನೆಗೆ ಕರೆದೊಯ್ದಿದ್ದಾರೆ.

ಈ ವೇಳೆ ಮಾತನಾಡಿದ ರಾಗಿಣಿ ಪೋಷಕರು, ತಡವಾಗಿ ಆದರೂ ರಾಗಿಣಿಗೆ ಜಾಮೀನು ಸಿಕ್ಕಿದೆ. ಆಕೆಯ ಆರೋಗ್ಯ ಚೆನ್ನಾಗಿಲ್ಲ. ಉಸಿರಾಟದ ತೊಂದರೆ,ಬೆನ್ನುನೋವಿನಿಂದ ಆಕೆ ಬಳಲುತ್ತಿದ್ದಾಳೆ.ಹೀಗಾಗಿ ನಾಳೆ ಆಕೆಯನ್ನು ಮೊದಲು ವೈದ್ಯರ ಬಳಿ ಕರೆದೊಯ್ಯುತ್ತೇವೆ. ಬಳಿಕ ಕಾನೂನು ಹೋರಾಟ ಮುಂದುವರೆಸುತ್ತೇವೆ. ನಮ್ಮ ಮಗಳು ನಿರಪರಾಧಿ ಎಂಬ ನಂಬಿಕೆ ನಮಗಿದೆ ಎಂದರು.

ರಾಗಿಣಿ ಕಳೆದ ಸಪ್ಟೆಂಬರ್ ನಲ್ಲಿ ಬಂಧನಕ್ಕೊಳಗಾಗಿದ್ದು ಆ ಬಳಿಕ ನಟಿ ಸಂಜನಾ ಗಲ್ರಾನಿ, ಪ್ರಮುಖ ಆರೋಪಿ ಶಿವಪ್ರಕಾಶ್ ಚಿಪ್ಪಿ, ಆದಿತ್ಯ ಆಳ್ವ ಸೇರಿದಂತೆ ಇದುವರೆಗೂ ೧೨ ಕ್ಕೂ ಹೆಚ್ಚು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಗಿಣಿ ಬಳಿಕ ಬಂಧನಕ್ಕೊಳಗಾಗಿದ್ದ ನಟಿ ಸಂಜನಾ ಗಲ್ರಾನಿ ಅನಾರೋಗ್ಯದ ಕಾರಣ ಮುಂದಿಟ್ಟು ಬೇಲ್ ಪಡೆದುಕೊಂಡಿದ್ದು ಈಗಾಗಲೇ ಜೈಲಿನಿಂದ ಹೊರಬಂದಿದ್ದಾರೆ.ಆದರೆ ರಾಗಿಣಿ ಮಾತ್ರ ಬರೋಬ್ಬರಿ 144 ದಿನಗಳ ಜೈಲುವಾಸದ ಬಳಿಕ ಹೊರಬಂದಿದ್ದಾರೆ. ಮಗಳ ಬಿಡುಗಡೆ ಬಳಿಕ ಹೊಟ್ಟೆ ತುಂಬ ಊಟ ಮಾಡಿ ಎರಡು ದಿನ ನೆಮ್ಮದಿಯಾಗಿ ನಿದ್ರಿಸುತ್ತೇನೆ ಎಂದು ರಾಗಿಣಿ ತಂದೆ ರಾಕೇಶ್ ದಿವೇದಿ ಹೇಳಿದ್ದಾರೆ.