ಕೆಲತಿಂಗಳಿನಿಂದ ಒಂದಿಲ್ಲೊಂದು ಕಾಂಗ್ರೆಸ್ ನಾಯಕರು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ಈಗ ಜಯನಗರ ಶಾಸಕಿ ಸೌಮ್ಯ ರೆಡ್ಡಿ. ಹಿಂದೊಮ್ಮೆ ಡಿಕೆಶಿ ಸಿಎಂ ಎಂದಿದ್ದ ಸೌಮ್ಯ ರೆಡ್ಡಿ ಮೊನ್ನೆ ನಡೆದ ಪ್ರತಿಭಟನೆ ವೇಳೆ ಖಾಕಿಮೇಲೆ ಕೈ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಸೌಮ್ಯ ರೆಡ್ಡಿಯನ್ನು ಬಿಜೆಪಿ ಸಂಸದರೊಬ್ಬರು ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.

ಮೊದಲ ಬಾರಿ ಶಾಸಕಿಯಾಗಿರುವ ಸೌಮ್ಯ ರೆಡ್ಡಿ ಕೆಲದಿನಗಳಿಂದ ವಿವಾದಗಳ ಕೇಂದ್ರಬಿಂದು ಆಗ್ತಿದ್ದಾರೆ. ಆದರೆ ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಆಕೆಯನ್ನು ಬೇಕೆಂದೇ ಟಾರ್ಗೆಟ್ ಮಾಡಲಾಗ್ತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕಿ ಸೌಮ್ಯ ರೆಡ್ಡಿ ತಂದೆ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

ಸಂಸದರ ಹೆಸರು ಹೇಳದೇ ವಾಗ್ದಾಳಿ ನಡೆಸಿದ ರಾಮಲಿಂಗಾ ರೆಡ್ಡಿ, ಬೆಂಗಳೂರು ದಕ್ಷಿಣ ಸಂಸದರು ಸೌಮ್ಯ ರೆಡ್ಡಿಯನ್ನು ಟಾರ್ಗೆಟ್ ಮಾಡಿದ್ದಾರೆ. ನಿರಂತರವಾಗಿ ಬಿಜೆಪಿ ಸಂಸದರಿಂದ ಸೌಮ್ಯ ಅವಹೇಳನ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸಂಸದರ ಕಚೇರಿಯಿಂದಲೇ ಸೌಮ್ಯ ರೆಡ್ಡಿಯವರ ಕುರಿತು ಅವಹೇಳನ ಹಾಗೂ ಅಪಮಾನಕರ ಮೆಸೆಜ್ ಹೋಗ್ತಿದೆ ಎಂದು ರಾಮಲಿಂಗಾ ರೆಡ್ಡಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಹತ್ವದ ಆರೋಪ ಮಾಡಿದ್ದಾರೆ.

ಜಯನಗರದ ಬಿಜೆಪಿ ಶಾಸಕ ವಿಜಯ್ ಕುಮಾರ್ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೌಮ್ಯ ರೆಡ್ಡಿ ಗೆಲುವು ಸಾಧಿಸಿದ್ದರು. ಬಿಜೆಪಿಯ ಭದ್ರಕೋಟೆಯಾಗಿದ್ದ ಜಯನಗರ ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು. ಆದರೆ ಈಗ ಬಿಜೆಪಿ ಶಾಸಕಿಯನ್ನು ಕಮಲಪಕ್ಷದ ಸಂಸದರು ಟಾರ್ಗೆಟ್ ಮಾಡಿದ್ದಾರೆ ಎಂಬ ಆರೋಪ ರೆಡ್ಡಿಯವರಿಂದ ಕೇಳಿಬಂದಿದೆ.