ಬೆಂಗಳೂರು : ಕೊರೊನಾ ವೈರಸ್ ಸೋಂಕು ಮಕ್ಕಳ ಪಾಲಿಗೆ ಡೇಂಜರ್ ಆಗಿ ಪರಿಣಮಿಸುತ್ತಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅದ್ರಲ್ಲೂ ಕೊರೊನಾ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ MISc ವಿಚಿತ್ರ ಸಮಸ್ಯೆ ಕಾಡುತ್ತಿದೆ.
ಮೊದಲ ಅಲೆಯಲ್ಲಿ ವಾರಕ್ಕೆ 2 ರಿಂದ 3 ಮಕ್ಕಳು ಮಾತ್ರವೇ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ರೆ, ಎರಡನೇ ಅಲೆಯಲ್ಲಿ ವಾರಕ್ಕೆ 25 ರಿಂದ 30 ಮಕ್ಕಳು ಆಸ್ಪತ್ರೆ ಸೇರುತ್ತಿದ್ದಾರೆ. ಒಂದೆಡೆ ಕೊರೊನಾ ಸೋಂಕು ಮಕ್ಕಳನ್ನು ಕಾಡುತ್ತಿದ್ರೆ ಇನ್ನೊಂದೆಡೆ ಕೊರೊನಾ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ವಿಚಿತ್ರ ಸಮಸ್ಯೆ ಕಾಡಲು ಶುರುವಾಗಿದೆ.
ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ ಮಕ್ಕಳಲ್ಲಿ ಒಂದೂವರೆಯಿಂದ ಎರಡು ತಿಂಗಳಲ್ಲಿ ವಿಚಿತ್ರ ಆರೋಗ್ಯ ಸಮಸ್ಯೆ ಕಾಡಲು ಶುರುವಾಗುತ್ತೆ. ಮೈ ಕೈ ಅಲ್ಲಿ ಅಲರ್ಜಿ, 101 ರಿಂದ 103 ಡಿಗ್ರಿಯಷ್ಟು ಜ್ವರ, ನಾಲಗೆ ಕೆಂಪಾಗುವುದು, ಕೈ ಕಾಲು, ಪಾದ ಒಡೆಯುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಇದನ್ನು multi system inflammatory syndrome ಸಮಸ್ಯೆ ಎಂದು ಕರೆಯಲಾಗುತ್ತದೆ.
ಪ್ರಮುಖವಾಗಿ ದೇಹದಲ್ಲಿನ ಆಂಟಿ ಬಾಡಿಯೇ ದೇಹದ ಮೇಲೆ ಪರಿಣಾಮವನ್ನು ಬೀರುವುದಕ್ಕೆ ಆರಂಭಿಸುತ್ತದೆ. ಈ ಸಮಸ್ಯೆಗೆ ತುತ್ತಾದ ಮಕ್ಕಳ ಹೃದಯ, ಲಿವರ್ ಮೇಲೆ ನೇರವಾದ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ಜಾಂಡಿಸ್ ಸಮಸ್ಯೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕೊರೊನಾ ಸೋಂಕಿನಿಂದ ಗುಣಮುಖರಾದ ಮಕ್ಕಳ ಮೇಲೆ ಪೋಷಕರು ಹೆಚ್ಚಿನ ನಿಗಾ ಇರಿಸಬೇಕಾಗಿದೆ. ಕೊರೊನಾ ಸೋಂಕು ಬಾರದಂತೆ ಮಕ್ಕಳನ್ನು ರಕ್ಷಣೆ ಮಾಡುವ ಕಾರ್ಯವನ್ನು ಪೋಷಕರು ಮಾಡಬೇಕು ಅಂತಾ ಖ್ಯಾತ ಮಕ್ಕಳ ವೈದ್ಯ ಡಾ. ಜಿ.ಟಿ.ಶ್ರೀಕಂಠ ಅವರು ತಿಳಿಸಿದ್ದಾರೆ.