ಬೆಂಗಳೂರು : ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ.
ರಾಜ್ಯದ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡುವ ಕುರಿತು ಎಸ್ಎಸ್ಎಲ್ ಸಿ, ಪಿಯುಸಿ ಮತ್ತು ಟಿಇಟಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ, ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಪದವಿಪೂರ್ವ ಶಿಕ್ಷಣ ಇಲಾಖೆಗೆ ನೀಡಿರುವ ಅನುದಾನ ವನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದ್ದು, ಅನುದಾನದ ಮಾಹಿತಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಖಾಸಗಿ ಶಾಲೆ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಮತ್ತು ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂಬ ಒತ್ತಾಯ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕೈಗೊಂಡಿದೆ.
ಪ್ರತಿ ಶಿಕ್ಷಕರಿಗೆ ತಲಾ 10 ಸಾವಿರ ದಂತೆ ಪರಿಹಾರ ನೀಡಿದರೂ ಕನಿಷ್ಠ 300 ಕೋಟಿ ರೂ.ಗಳಿಗಿಂತಲೂ ಅಧಿಕ ಮೊತ್ತದ ಅನುದಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಅನುದಾನದ ಲಭ್ಯತೆಯನ್ನು ತಿಳಿಯಲು ಮುಂದಾಗಿದೆ. ನಂತರದಲ್ಲಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗು ತ್ತದೆ ಎಂದು ತಿಳಿದುಬಂದಿದೆ. ಅಲ್ಲದೇ ಶಿಕ್ಷಕರ ವೇತನ ಕಡಿತದ ಕುರಿತು ಈಗಾಗಲೇ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.