ಬೆಂಗಳೂರು : ಬೈಕ್ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಂಚಾರಿ ವಿಜಯ್ ಅವರು ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ. ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದ್ದು, ವೈದ್ಯರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ ಎಂದು ಖ್ಯಾತ ನಟ ನಿನಾಸಂ ಸತೀಶ್ ಹೇಳಿದ್ದಾರೆ.
ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಸಂಚಾರಿ ವಿಜಯ್ ಅವರ ಆರೋಗ್ಯ ವಿಚಾರಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಯಾರೂ ಕೂಡ ಆತಂಕ ಪಡುವುದು ಬೇಡಾ. ವಿಜಯ್ ಅವರಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಅವರು ಸದ್ಯ ಕೋಮಾದಲ್ಲಿದ್ದಾರೆ. ವೈದ್ಯರು ಯಾವುದೇ ತೊಂದರೆ ಇಲ್ಲಾ ಎಂದು ತಿಳಿಸಿದ್ದಾರೆ. ಹೀಗಾಗಿ ಸಂಚಾರಿ ವಿಜಯ್ ಅವರು ಶೀಘ್ರದಲ್ಲಿಯೇ ಚೇತರಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
ನಿನ್ನೆ ರಾತ್ರಿ ಸ್ನೇಹಿತ ನವೀನ್ ಜೊತೆಯಲ್ಲಿ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಂಚಾರಿ ವಿಜಯ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಜಯನಗರ ಠಾಣೆಯ ಪೊಲೀಸರು ನವೀನ್ ಅವರಿಂದ ಹೇಳಿಕೆಯನ್ನು ಪಡೆದುಕೊಂಡಿದ್ದು, ವಿಜಯ್ ಅವರ ಬೈಕ್ ನ್ನು ವಶ ಪಡಿಸಿಕೊಂಡಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾಗಳ ದೃಶ್ಯವನ್ನು ಪರಿಶೀಲನೆ ನಡೆಸುತ್ತಿದ್ದು, ಸ್ಥಳೀಯರಿಂದಲೂ ಜಯನಗರ ಠಾಣೆಯ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.