- ಹೇಮಂತ್ ಚಿನ್ನು
“ನೀರಿನಲ್ಲಿ ಅಲೆಯ ಉಂಗುರ, ಕೆನ್ನೆ ಮೇಲೆ ಪ್ರೇಮದುಂಗುರ” ಹಾಡು ಕೇಳಿದ್ದೀರಲ್ಲ. ಈ ರೀತಿ ನಿಮ್ಮ ಪ್ರೇಯಸಿ ಅಥವಾ ಮಡದಿಯ ಕೆನ್ನೆ ಮೇಲೆ ಪ್ರೇಮದುಂಗುರ ನೋಡಬೇಕಾದರೆ ನೀವು ತಪ್ಪದೇ ಆಕೆಯನ್ನು ತಮಿಳುನಾಡಿನ ಪಾಂಡಿಚೇರಿ ಬಳಿಯ ತರಂಗಂಬಾಡಿಗೆ ಕರೆದುಕೊಂಡು ಹೋಗಬೇಕು.

ತರಂಗಂಬಾಡಿ ತಮಿಳುನಾಡಿನ ಪಾಂಡಿಚೇರಿಯಿಂದ 4 ಗಂಟೆ ಪ್ರಯಾಣ ಮಾಡುವಷ್ಟು ದೂರವಿರುವ ಚಿಕ್ಕ ಪಟ್ಟಣ. ಈ ಊರಿಗೆ ಈ ಹೆಸರು ಬರಲು ಒಂದು ಕಾರಣವಿದೆ. ಈ ಪಟ್ಟಣ ಬಂಗಾಳಕೊಲ್ಲಿ ಕರಾವಳಿ ತೀರದಲ್ಲಿದ್ದು, ಇಲ್ಲಿ ಸದಾಕಾಲ ತರಂಗಗಳ ನಾದ ಸಂಗೀತದಂತೆ ಜೋಗುಳ ಹಾಡುತ್ತಿರುತ್ತದೆ. ಅದಕ್ಕೆ ತರಂಗ0ಬಾಡಿ ಎಂದು ಕರೆಯಲಾಗುತ್ತದೆ.

17ನೇ ಶತಮಾನದಿಂದ 19ನೇ ಶತಮಾನದವರೆಗೂ ಡ್ಯಾನಿಶ್ ರಿಂದ ಆಳಲ್ಪಟ್ಟಿತ್ತು. 160 ವರ್ಷಗಳ ಕಾಲ ಅವರ ವಸಹಾತು ಆಗಿತ್ತು. ಅದರ ಕುರುಹಾಗಿ ಇಂದಿಗೂ ಅಲ್ಲಿ ಡ್ಯಾನಿಶ್ ವಾಸ್ತುಶಿಲ್ಪದ ಸುಂದರ ಪುರಾತನ ಮನ ಮೋಹಕ ಕಟ್ಟಡಗಳು ಇವೆ. ಈ ಊರಿನ ಹೆಸರು ಡ್ಯಾನಿಶ್ ಪಾಲನೆಯ ಕಾಲದಲ್ಲಿ ಟ್ರಾಂಕ್ವೆಂಬಾರ್ ಎಂದು ಇತ್ತು. ಈಗ ಅದನ್ನು ತರಂಗಂಬಾಡಿ ಎಂದು ಕರೆಯುತ್ತಾರೆ.

ಇಲ್ಲಿ ಪ್ರಮುಖವಾಗಿ ನೋಡಬೇಕಾದ ಸ್ಥಳಗಳಲ್ಲಿ ಗೇಟ್ ವೇ ಆಫ್ ಟ್ರಾಂಕ್ವೆಂಬಾರ್ ಮೊದಲನೆಯದು. ಇದರ ಮೇಲೆ 1792 ಎಂದು ಬರೆಯಲಾಗಿದೆ. ಇದರ ಅರ್ಥ ಧವಳ ವರ್ಣದ ಈ ಡ್ಯಾನಿಶ್ ವಾಸ್ತುಶಿಲ್ಪದ ಗೇಟ್ ವೇಯನ್ನು 1792ರಲ್ಲಿ ನಿರ್ಮಿಸಲಾಯಿತು ಎಂದು. ಇಲ್ಲಿನ ಡ್ಯಾನಿಶ್ ಪೋರ್ಟ್ ಎಂದು ಕರೆಯಲ್ಪಡುವ ಕೋಟೆ 1620ರಲ್ಲಿ ಡ್ಯಾನಿಶ್ ರಿಂದ ನಿರ್ಮಿಸಲ್ಪಟ್ಟಿದೆ.

ಬಂಗಾಳಕೊಲ್ಲಿಯ ತೀರದಲ್ಲಿದ್ದು ಈ ಕೋಟೆಯಿಂದ ಸಮುದ್ರ ತೀರದ ನೋಟ ಅತ್ಯದ್ಭುತವಾಗಿರುತ್ತದೆ. ಈ ಕೋಟೆಯ ನಿರ್ಮಾಣ ಶೈಲಿ ವಿಶಿಷ್ಟವಾಗಿದ್ದು ಎತ್ತರವಾದ ಕಂಬಗಳು, ಆ ಕಂಬಗಳಿಗಿಂತ ಸ್ವಲ್ಪ ಕೆಳಗೆ ಸೀಲಿಂಗ್, ಎರಡು ಅಂತಸ್ತಿನ ಈ ಕಟ್ಟಡದ ಕೋಣೆಗಳು ಯಾವಾಗಲೂ ಮುಚ್ಚಲ್ಪಟ್ಟಿದ್ದು ಫಿರಂಗಿಯೊಂದು ಯಾವಾಗಲೂ ಸಮುದ್ರದ ಕಡೆ ಗುರಿ ಇಟ್ಟ ಹಾಗೆ ಇದೆ. ತಿಳಿಕೆಂಪು ಬಣ್ಣದ ಈ ಕೋಟೆ ನಯನ ಮನೋಹರವಾಗಿದೆ.

ಇಲ್ಲಿನ ಮತ್ತೊಂದು ಪ್ರೇಕ್ಷಣೀಯ ಸ್ಥಳ ನ್ಯೂ ಜೆರೂಸಲೇಮ್ ಚರ್ಚ್(new jerusalem church). ಇದನ್ನು 1707ರಲ್ಲಿ ನಿರ್ಮಿಸಲಾಯಿತು. ಆದರೆ 1715 ರ ಸುನಾಮಿಯಲ್ಲಿ ಚರ್ಚ್ ಹಾಳಾದ್ದರಿಂದ ನಂತರ ಅದನ್ನು ಪುನರ್ ನಿರ್ಮಿಸಲಾಯಿತು. ಈ ಬಿಳಿಯ ಬಣ್ಣದ ವಿಶಾಲವಾದ ಕೊಠಡಿಗಳಿಂದ ಕೂಡಿದ ಚರ್ಚ್ ಡ್ಯಾನಿಶ್ ಹಾಗೂ ಭಾರತೀಯ ವಾಸ್ತುಶಿಲ್ಪಗಳನ್ನು ಒಳಗೊಂಡಿದೆ.

ಚರ್ಚ್ ಭೇಟಿಯ ನಂತರ ನೋಡಲೇಬೇಕಾದ ಸ್ಥಳ ಮರಿಟೈಮ್ ಮ್ಯೂಸಿಯಂ.(maritime museum) ಡ್ಯಾನಿಶ್ ರು ಉತ್ತಮ ನಾವಿಕರಾಗಿದ್ದರು. ಅವರು ಬಳಸುತ್ತಿದ್ದ ದೋಣಿಗಳು, ನಕ್ಷೆಗಳು, ಪುಸ್ತಕಗಳು, ತಿಮಿಂಗಲಗಳ ಅಸ್ಥಿಪಂಜರಗಳು, ಪಳೆಯುಳಿಕೆಗಳು ಅವರ ಇತರೆ ವಸ್ತುಗಳು ಈ ಮ್ಯೂಸಿಯಂ ನಲ್ಲಿ ಇವೆ. 2004ರ ತ್ಸುನಾಮಿಯ ಪರಿಣಾಮಗಳ ಬಗ್ಗೆ ಭಾವಚಿತ್ರ ಹಾಗೂ ಚಲನಚಿತ್ರ ಪ್ರದರ್ಶನವನ್ನು ಭಾರತೀಯರಿಗೆ 5ರೂ ದರದಲ್ಲಿ ಪ್ರದರ್ಶಿಸುವುದು ಈ ಮ್ಯೂಸಿಯಂನ ವಿಶೇಷ.

ಇಲ್ಲಿನ ಬೀಚ್ ಸಹ ಬಹಳ ರೊಮ್ಯಾಂಟಿಕ್ ಆಗಿದ್ದು, ನಿಮ್ಮ ಸಂಗಾತಿಯೊಂದಿಗೆ ಬೀಚ್ ಗುಂಟ ನಡೆಯುತ್ತಿದ್ದರೆ ಅವರ ಕೆನ್ನೆ ಮೇಲೆ ಪ್ರೇಮದುಂಗುರ ಮಾಡುವುದು ಗ್ಯಾರಂಟಿ. ಈ ಬೀಚ್ ನಲ್ಲಿ ಇರುವ ನೋಬಲ್ ಮ್ಯಾನ್ ಬಂಗ್ಲೋ ಒಂದು ಆಕರ್ಷಣೆಯ ಸ್ಥಳ. ಇದನ್ನು ಈಗ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಇಲ್ಲಿ ಕಿಂಗ್ಸ್ ಚರ್ಚ್, ರೆಹ್ಲಿಂಗ್ ಹೌಸ್, ವ್ಯಾನ್ ಥೆಲಿಂಗನ್ ಹೌಸ್ ನಂತಹ ಸ್ಥಳಗಳೂ 1305 ನೇ ಇಸವಿಗೂ ಮೊದಲಿನ ಮಾಸಿಲ ಮಣಿನಾಥರ್ ಎಂಬ ಶಿವನ ದೇವಸ್ಥಾನವೂ, ಹಜರತ್ ಮೀನಾ ದರ್ಗಾ, ಉಪ್ಪನಾರ್ ನದಿಯಲ್ಲಿ ದೋಣಿ ವಿಹಾರ ಇವೆಲ್ಲವನ್ನೂ ವೀಕ್ಷಿಸಿ ಮನದಣಿಯ ಬಹುದು. ಇದು ಇತಿಹಾಸ ಸಂಶೋಧಕರಿಗೂ, ಬೀಚ್ ಎಂಜಾಯ್ ಮಾಡುವವರಿಗೂ, ತರಂಗಗಳ ನಾದಕ್ಕೆ ಮನಸೋಲುವವರಿಗೂ ದೇವರ ದರುಶನಕ್ಕೂ ದೋಣಿಯಾನಕ್ಕೂ ಸೂಕ್ತ ಸ್ಥಳ.