ಹಿಮಾಚಲ ಪ್ರದೇಶ : ಮೇಘಸ್ಫೋಟದಿಂದ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆಯಿಂದಾಗಿ ದಿಢೀರನೇ ಕಾಣಿಸಿಕೊಂಡ ಪ್ರವಾಹಕ್ಕೆ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಕೊಚ್ಚಿ ಹೋಗಿವೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಭಾರತದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಜಮ್ಮು -ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದ್ರಲ್ಲೂ ಹಿಮಾಚಲ ಪ್ರದೇಶದ ಧರ್ಮಶಾಲಾದ ಮೆಕ್ಲೋಡೆಗಂಜ್ ಬಳಿಯಿರುವ ಭಗ್ಸು ನಾಗ್ ನಲ್ಲಿ ದಿಢೀರನೇ ಪ್ರವಾಹ ಕಾಣಿಸಿಕೊಂಡಿದೆ. ಪ್ರವಾಹಕ್ಕೆ ವಾಹನಗಳು ಕೊಚ್ಚಿ ಹೋಗುತ್ತಿರುವ ದೃಶ್ಯ ಭಯವನ್ನು ಹುಟ್ಟಿಸುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದು, ಧರ್ಮಶಾಲಾ ಸುತ್ತಮುತ್ತಲೂ ಸುಮಾರು 3000 ಮಿ.ಮೀ. ಮಳೆಯಾಗುವ ಮೂಲಕ ದಾಖಲೆ ಸೃಷ್ಟಿಸಿದ್ದು, ಹಲವು ಮನೆಗಳು ಜಖಂ ಆಗಿವೆ. ಇನ್ನು ಎಲ್ಲಾ ವಿವಾನಗಳ ಹಾರಾಟವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ಧರ್ಮಶಾಲಾ ಮತ್ತು ದೆಹಲಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಪ್ರವಾಹದಲ್ಲಿ ಪ್ರವಾಸಿಗರು ಸಿಲುಕುವ ಭೀತಿ ಎದುರಾಗಿದೆ. ಇನ್ನು ರಾಂಪುರ್ ಪ್ರದೇಶದ ಶಿಮ್ಲಾ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಲ್ಲದೇ ಹಿಮಾಚಲ ಪ್ರದೇಶದಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕಾಂಗ್ರಾದಲ್ಲಿ ಪ್ರವಾಹಕ್ಕೆ ಓರ್ವ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾನೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದು, ಅಗತ್ಯ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಾಚರಣೆಗೆ ಕೇಂದ್ರ ಎನ್‌ಡಿಆರ್‌ಎಫ್ ತಂಡಗಳನ್ನು ಹಿಮಾಚಲ ಪ್ರದೇಶಕ್ಕೆ ಕಳುಹಿಸಿಕೊಟ್ಟಿದೆ. ಅಲ್ಲದೇ ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತವಾಗಿದೆ.