ಕಾಬೂಲ್ : ಅಫ್ಘಾನ್ ಸರ್ಕಾರವನ್ನು ಪತನಗೊಳಿಸಿ ಇಡೀ ದೇಶವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನಿಗಳು, ಇದೀಗ ಜನರನ್ನು ಹಿಂಸಿಸಿ, ಆತಂಕದ ಪಾಳು ಭಾವಿಗೆ ದೂಡಿದ್ದಾರೆ. ಹಿಂಸೆ ತಾಳಲಾರದ ಅಫ್ಘಾನ್ ಸ್ಥಳೀಯ ಪ್ರಜೆಗಳು ಇದೀಗ ತಾಲಿಬಾನ್ ವಿರುದ್ದ ದಂಗೆ ಎದ್ದಿದ್ದಾರೆ.
ಈ ಹಿಂದೆ ಕಾಬೂಲ್ ನಲ್ಲಿ ತಾಲಿಬಾನ್ ಗಳ ಹಿಂಸೆ ಮೀತಿ ಮೀರಿ ಹೋಗಿತ್ತು. ಹೀಗಾಗಿ ಅಲ್ಲಿನ ಜನರೇ ಉಗ್ರರ ವಿರುದ್ದ ತಿರುಗಿ ಬಿದ್ದಿದ್ದಾರೆ. ಈಗಾಗಲೇ ಸ್ಥಳೀಯ ಪ್ರತಿರೋಧ ಗುಂಪುಗಳು ಅಫ್ಘಾನಿಸ್ತಾನದ ಮೂರು ಜಿಲ್ಲೆಗಳನ್ನು ತಾಲಿಬಾನ್ ತೆಕ್ಕೆಯಿಂದ ಕಸಿದುಕೊಂಡಿವೆ ಎಂದು ವರದಿಗಳು ತಿಳಿಸಿವೆ.
ಖೈರ್ ಮುಹಮ್ಮದ್ ಅಂದರಾಬಿ ಎಂಬುವರ ನಾಯಕತ್ವದಲ್ಲಿ ಸ್ಥಳೀಯರು ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ನಡೆಸಿದ್ದಾರೆ. ಈ ವೇಳೆ 60 ಉಗ್ರರು ಗಾಯಗೊಂಡಿದ್ದಾರೆ ಅಥವಾ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ತಿಕ್ಕಾಟದಿಂದಾಗಿ ಪೊಲ್-ಎ-ಹೆಸರ್, ದೆಹ್ ಸಲಾಹ್ ಹಾಗೂ ಬಾನು ಜಿಲ್ಲೆಗಳು ಸ್ಥಳೀಯರ ಕೈವಶವಾಗಿವೆ.
ಇತರೆ ಜಿಲ್ಲೆಗಳನ್ನೂ ತಾಲಿಬಾನ್‌ನಿಂದ ಕಸಿಯಲು ಸ್ಥಳೀಯರು ಸ್ಥಾಪಿಸಿಕೊಂಡಿರುವ ಪ್ರತಿರೋಧ ಪಡೆಗಳು ಮುನ್ನುಗ್ಗುತ್ತಿವೆ. ಪೊಲ್-ಎ-ಹೆಸರ್ ಜಿಲ್ಲೆ ಕಾಬೂಲ್‌ನಿಂದ ಉತ್ತರ ದಿಕ್ಕಿಗಿದೆ. ತಾಲಿಬಾನಿಗಳಿಗೆ ಅಭೇದ್ಯ ಕೋಟೆಯಂತಾಗಿರುವ ಪಂಜ್‌ಶೀರ್ ಕಣಿವೆಗೆ ಇದು ಸನಿಹದಲ್ಲಿದೆ ಎಂದು ವರದಿಗಳು ಹೇಳಿವೆ.