ಅಹಮದಾಬಾದ್ : ಕೋವಿಡ್ ಸಾಂಕ್ರಾಮಿಕದಿಂದ ರಕ್ಷಣೆಗಾಗಿ ಲಸಿಕೆ ಪಡೆಯಲು ದೇಶದೆಲ್ಲೆಡೆ ಜಾಗೃತಿ ಅಭಿಯಾನಗಳು ಜೋರಾಗುತ್ತಿದೆ. ಗಣೇಶೋತ್ಸವದ ಪ್ರಯುಕ್ತ ಗುಜರಾತ್ನಲ್ಲಿ ಖುದ್ದು ಗಣೇಶನ ಮೂರ್ತಿಗಳ ಮೂಲಕ ಲಸಿಕೆ ಪಡೆಯಲು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.
ಅಹಮದಾಬಾದ್ನ ವೆಜಾಲ್ಪುರದ ಗಣೇಶ ಯುವ ಮಂಡಲ ಆಯೋಜಿಸಿರುವ ಗಣೇಶೋತ್ಸವದಲ್ಲಿ ಕೋವಿಡ್-19 ಥೀಂನಲ್ಲಿ ಪೆಂಡಾಲ್ ಅನ್ನು ಸಿಂಗರಿಸಲಾಗಿದೆ. ಖುದ್ದು ಗಣೇಶನನ್ನೇ ವೈದ್ಯರ ರೂಪದಲ್ಲಿ ಮೂರ್ತಿಯನ್ನಾಗಿಸಿ ಕೂರಿಸಲಾಗಿದ್ದು, ಪಿಪಿಇ ಕಿಟ್ನಲ್ಲಿರುವ ವಿಘ್ನೇಶ್ವರ ಸ್ಟೆತೋಸ್ಕೋಪ್ ಹಿಡಿದು ಆರೋಗ್ಯ ಸೇವಾ ಕಾರ್ಯಕರ್ತರು ಸೇರಿದಂತೆ ಸಾಂಕ್ರಾಮಿಕದ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಮಂದಿಗೆ ಗೌರವ ಸಲ್ಲಿಸುವಂತೆ ಮಾಡಲಾಗಿದೆ.
ಹಿನ್ನೆಲೆಯಲ್ಲಿ ಆಸ್ಪತ್ರೆಯ ಪೇಂಟಿಂಗ್ ಇದ್ದು, ಲೌಡ್ಸ್ಪೀಕರ್ಗಳಲ್ಲಿ ಸಂದೇಶ ಸಾರುವ ಮೂಲಕ ಲಸಿಕೆ ವಿರುದ್ಧ ಇರುವ ಮಿಥ್ಯೆಗಳನ್ನು ಹೋಗಲಾಡಿಸು ಪ್ರಯತ್ನ ಮಾಡಲಾಗಿದೆ. ವೈರಸ್ನಿಂದ ತೀವ್ರತರನಾದ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಲಸಿಕೆ ಅತ್ಯಗತ್ಯ ಎಂದು ಸಂದೇಶ ಸಾರುತ್ತಿದ್ದಾನೆ ಈ ಡಾ. ಗಣೇಶ.
ಗಣೇಶೋತ್ಸವ ಸಮಿತಿಯ ಸಿಬ್ಬಂದಿಯಲ್ಲಿ ಒಬ್ಬರಾದ ಪ್ರಶಾಂತ್ ಲಗಾದ್ ಮತನಾಡಿ, “ಪ್ರಚಲಿತ ವಿದ್ಯಮಾನಗಳನ್ನು ಥೀಂ ಮಾಡಿಕೊಂಡು ಗಣೇಶ ಪೆಂಡಾಲ್ ಮಾಡಿದ್ದೇವೆ. 2019ರಲ್ಲಿ ಸರ್ಜಿಕಲ್ ದಾಳಿಯಾದ ವೇಳೆ ನಾವು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ರನ್ನು ತೋರಿದ್ದೆವು. ಹೀಗಾಗಿ ಈ ಬಾರಿ ನಾವು ಕೋವಿಡ್ ಥೀಂನಲ್ಲಿ ಉತ್ಸವ ಆಚರಿಸುವುದು ಸಹಜವೇ ಆಗಿದೆ” ಎಂದಿದ್ದಾರೆ.
(Ganesha idol designed to looks like wearing PPE kit to create awareness amongst people)