ಬೆಂಗಳೂರು : ರಾಜ್ಯದಲ್ಲಿ ನಡೆದ ಹಾನಗಲ್ (Hanagal)ವಿಧಾನಸಭಾ ಉಪಚುನಾವಣೆಯ ಸೋಲಿನ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಂಡಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿಯೇ ಬಿಜೆಪಿ ಸೋಲು ಕಂಡಿರುವುದು ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೀಗ ಬಿಜೆಪಿ ಆತ್ಮಾವಲೋಕನಕ್ಕೆ ಮುಂದಾಗಿದೆ. ಇಂದು ಬಿಜೆಪಿ (BJP) ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಯಲಿದೆ.
ಇತ್ತೀಚಿಗಷ್ಟೇ ನಡೆದ ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಸಿಂಧಗಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇನ್ನೊಂದೆಡೆ ಬಸವರಾಜ್ ಬೊಮ್ಮಾಯಿ ಅವರ ಸ್ವಕ್ಷೇತ್ರವಾಗಿರೋ ಹಾನಗಲ್‌ನಲ್ಲಿ ಬಿಜೆಪಿ ಸೋಲು ಕಂಡಿದೆ. ಮಾಜಿ ಸಚಿವ ಸಿಎಂ ಉದಾಸಿ ಅವರ ಸ್ವಕ್ಷೇತ್ರ, ಜೊತೆಗೆ ಸಿಎಂ ಉದಾಸಿ ಅವರ ಪುತ್ರ ಶಿವಕುಮಾರ್ ಉದಾಸಿ ಇದೇ ಕ್ಷೇತ್ರದ ಬಿಜೆಪಿ ಸಂಸದ. ಇಷ್ಟೆಲ್ಲಾ ಇದ್ದರೂ ಕೂಡ ಬಿಜೆಪಿ ಹಾನಗಲ್ ಕ್ಷೇತ್ರವನ್ನು ಗೆಲ್ಲುವಲ್ಲಿ ವಿಫಲವಾಗಿದೆ.
ಉಪಚುನಾವಣೆಯ ಸೋಲು ಬಿಜೆಪಿಯನ್ನು ಕಂಗೆಡಿಸಿದೆ. ಮೊದಲ ಸೋಲಿನಿಂದಲೇ ಎಚ್ಚೆತ್ತುಕೊಳ್ಳಲು ಮುಂದಾಗಿರುವ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲು ಮುಂದಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಲವು ಸಮಯದ ನಂತರ ರಾಜ್ಯಕ್ಕೆ ಭೇಟಿಯನ್ನು ನೀಡುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. ನಂತರ ಸಭೆಯಲ್ಲಿ ಚರ್ಚೆಯಾಗುವ ವಿಚಾರ ಮಧ್ಯಾಹ್ನ ನಡೆಯಲಿರುವ ಕೋರ್ ಕಮಿಟಿಯ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖವಾಗಿ ಹಾನಗಲ್ ಉಪಚುನಾವಣೆಯ ಜೊತೆಗೆ ಶೀಘ್ರದಲ್ಲಿಯೇ ಎದುರಾಗುವ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಬಗ್ಗೆ ಚರ್ಚೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸದಸ್ಯ ಸ್ಥಾನದ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಕುರಿತು ಚರ್ಚೆ ನಡೆಯಲಿದೆ.
ಮುಂದಿನ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದ್ದ ಬಿಜೆಪಿ ಇದೀಗ ಚುನಾವಣೆಗೆ ಸಿದ್ದತೆ ನಡೆಸುತ್ತಿದೆ. ಆದರೆ ಸಿಎಂ ತವರು ಜಿಲ್ಲೆಯಲ್ಲಿಯೇ ಬಿಜೆಪಿಗೆ ಎದುರಾಗಿರುವ ಸೋಲು ಕಮಲ ಪಾಳಯದಲ್ಲಿ ತಳಮಳ ಮೂಡಿಸಿದೆ.
ಇದನ್ನೂ ಓದಿ : ಸಿಂದಗಿಯಲ್ಲಿ ಬಿಜೆಪಿ ಗೆಲುವು, ಸಿಎಂ ತವರು ಹಾನಗಲ್‌ನಲ್ಲಿ ಗೆದ್ದ ಕಾಂಗ್ರೆಸ್, ಖಾತೆ ತೆರೆಯದ ಜೆಡಿಎಸ್
ಇದನ್ನೂ ಓದಿ : ಕರ್ನಾಟಕದಲ್ಲಿ ಬದಲಾಗುತ್ತಾ ಬಿಜೆಪಿ ನಾಯಕತ್ವ: ಉಸ್ತುವಾರಿ ಅರುಣ್ ಸಿಂಗ್ ಏನಂದ್ರು ಗೊತ್ತಾ?