ಧಾರವಾಡ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಇಳಿಕೆಯಾಯ್ತು ಅಂತಾ ನೆಮ್ಮದಿಯ ನಿಟ್ಟುಸಿರುವ ಬಿಡುವ ಮುನ್ನವೇ ಧಾರವಾಡದ ಎಸ್‌ಡಿಎಂ (SDM) ಕಾಲೇಜಿನಲ್ಲಿ ಕೊರೊನಾ ಸ್ಪೋಟ ಸಂಭವಿಸಿದೆ. ಕಾಲೇಜಿನಲ್ಲಿ ಇಂದು 25ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾ ಸೋಂಕಿತರ ಸಂಖ್ಯೆ 306ಕ್ಕೆ ಏರಿಕೆ ಕಂಡಿದೆ.
ಕಾಲೇಜಿನಲ್ಲಿ ಆರಂಭದಲ್ಲಿ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಿದಾಗ 66 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ನಿನ್ನೆ ಸೋಂಕಿತರ ಸಂಖ್ಯೆ ಮುನ್ನೂರರ ಅಂಚಿನಲ್ಲಿದ್ದು, ಇಂದು ೨೫ ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕಿಯರ ಸಂಖ್ಯೆ 306ಕ್ಕೆ ಏರಿಕೆಯಾಗಿದೆ.

ಕೊರೊನಾ ಸ್ಪೋಟ ಸಂಭವಿಸಿದ ಬೆನ್ನಲ್ಲೇ ಕಾಲೇಜು, ಹಾಸ್ಟೆಲ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ಓಪಿಡಿಯನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕಿತ ವಿದ್ಯಾರ್ಥಿಗಳ ಜೊತೆಗೆ ಸಂಪರ್ಕ ಹೊಂದಿರುವವರ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನೂ ಮಾಡಲಾಗುತ್ತಿದೆ.

ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾಲೇಜಿಗೆ ಭೇಟಿಯನ್ನು ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಎಸ್‌ಡಿಎಂ ಕಾಲೇಜಿನಲ್ಲಿ ಕೊರೊನಾ ಸ್ಪೋಟ ಸಂಭವಿಸಿದ ಬೆನ್ನಲ್ಲೇ ಧಾರವಾಡದಲ್ಲಿ ಕೊರೊನಾ ಪಾಸಿಟಿವಿಟಿ ದರ 1.16ಕ್ಕೆ ಏರಿಕೆಯನ್ನು ಕಂಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಕಾಲೇಜಿನಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಳ ಮಾಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳ ಜೊತೆಗೆ ಮಾತುಕತೆಯನ್ನು ನಡೆಸಿದ್ದು, ಕಟ್ಟೆಚ್ಚರವಹಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಕರ್ನಾಟಕಕ್ಕೆ ಒಮಿಕ್ರಾನ್ ಭೀತಿ ಎದುರಾಗಿರುವ ಹೊತ್ತಲೇ ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ ಕೊರೊನಾ ಸ್ಪೋಟಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಸೋಂಕಿತ ವಿದ್ಯಾರ್ಥಿಗಳನ್ನು ಈಗಾಗಲೇ ಐಸೋಲೇಷನ್ ಹಾಗೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಇದನ್ನೂ ಓದಿ : ಪುನೀತ್ ಅಭಿಮಾನಿ ಕಷ್ಟಕ್ಕೆ ಮಿಡಿದ ಕಿಚ್ಚ: ಚಿಕಿತ್ಸೆ ವೆಚ್ಚ ಭರಿಸಿದ ಸುದೀಪ್
ಇದನ್ನೂ ಓದಿ : ಕರ್ನಾಟಕಕ್ಕೆ ಒಮಿಕ್ರಾನ್ ಭೀತಿ : ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ ಸೋಂಕು ದೃಢ !
(Corona shock at SDM college: number of infected rise to 306)