ಉಡುಪಿ : ಕೊರೊನಾ ವೈರಸ್ ಸೋಂಕಿನ ಅಬ್ಬರ ಎಲ್ಲೆಡೆ ಮುಂದುವರಿದಿದೆ. ಆದರೆ ಉಡುಪಿ ಜಿಲ್ಲೆ ಕೊರೊನಾ ವಿರುದ್ದದ ಹೋರಾಟದಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯಲ್ಲಿದ್ದ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಹೊಸ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಶೀಘ್ರದಲ್ಲಿಯೇ ಉಡುಪಿ ಕೊರೊನಾ ಹಸಿರು ವಲಯವಾಗಿ ಘೋಷಣೆಯಾಗಲಿದೆ.

ಮಾರ್ಚ್ 25ರಂದು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅಲ್ಲದೇ ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮಾತ್ರವಲ್ಲ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಗರ್ಭಿಣಿ ಮಹಿಳೆಯನ್ನೂ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದ್ರೆ ಸರಿಯಾಗಿ ಒಂದು ತಿಂಗಳ ಅವಧಿಯಲ್ಲಿ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಾತ್ರವಲ್ಲ ಜಿಲ್ಲೆಯಲ್ಲಿ ಬೇರಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗುವತ್ತ ಸಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 3,238 ಜನರನ್ನು ಕೊರೊನಾ ತಪಾಸಣೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇದುವರೆಗೆ 1,024 ಮಂದಿಯ ಗಂಟಲಿನ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ. 947 ಮಾದರಿಗಳಲ್ಲಿ ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟಿತ್ತು, ಉಳಿದಂತೆ 74 ಪರೀಕ್ಷಾ ವರದಿಗಳಿಗಾಗಿ ಕಾಯಲಾಗುತ್ತಿದೆ.

ಅಲ್ಲದೇ 1,929 ಜನರು 28 ದಿನಗಳ ಕ್ವಾರಂಟೈನ್ ಹಾಗೂ 2,512 ಜನರು 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದರು. ಇದೀಗ 50 ಮಂದಿಯನ್ನು ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಎಲ್ಲಾ ವರದಿಯೂ ಜಿಲ್ಲಾಡಳಿತದ ಕೈ ಸೇರುತ್ತಿದ್ದಂತೆಯೇ ಕೇಂದ್ರ ಆರೋಗ್ಯ ಇಲಾಖೆ ಉಡುಪಿಯನ್ನು ಹಸಿರು ವಲಯವನ್ನಾಗಿ ಘೋಷಿಸೋ ಸಾಧ್ಯತೆಯಿದೆ.