ಮಂಗಳವಾರ, ಮೇ 13, 2025
HomeNationalಗಲ್ಪ್ ರಾಷ್ಟ್ರದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವುದು ನಿಜನಾ ?

ಗಲ್ಪ್ ರಾಷ್ಟ್ರದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವುದು ನಿಜನಾ ?

- Advertisement -

ನವದೆಹಲಿ : ಕೊರೊನಾ ಮಹಾಮಾರಿ ವಿಶ್ವವನ್ನೇ ನಡುಗಿಸಿದೆ. ಗಲ್ಪ್ ರಾಷ್ಟ್ರಗಳು ಕೊರೊನಾ ಹೊಡೆತಕ್ಕೆ ನೆಲಕಚ್ಚಿವೆ, ಗಲ್ಪ್ ರಾಷ್ಟ್ರಗಳು ತನ್ನ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯರನ್ನು ಸ್ವದೇಶಕ್ಕೆ ತೆರಳುವಂತೆ ಸೂಚಿಸಿದೆ. ಕೇಂದ್ರ ಸರಕಾರ ಕೂಡ ವಾಯಸೇವೆ, ನೌಕಾ ಸೇನೆ ಹಾಗೂ ಏರ್ ಇಂಡಿಯಾ ವಿಮಾನಗಳನ್ನು ಬಳಸಿ ಭಾರತೀಯರನ್ನು ಕರೆತರಲು ಮುಂದಾಗಿದೆ ಎನ್ನಲಾಗುತ್ತಿದೆ. ಆದ್ರೆ ಕೋಟ್ಯಾಂತರ ಜನರನ್ನು ಕರೆತರುವುದು ಅಷ್ಟು ಸುಲಭ ಸಾಧ್ಯವಲ್ಲ.

ಗಲ್ಪ್ ರಾಷ್ಟ್ರಗಳಾಗಿರೋ ಯುಎಇ, ಸೌದಿ ಅರೇಬಿಯಾ, ಕುವೈಟ್‌, ಒಮಾನ್‌, ಕತಾರ್‌, ಬಹ್ರೈನ್‌ಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರೇ ನೆಲೆಸಿದ್ದಾರೆ. ಆದರೆ ವಿಶ್ವದಾದ್ಯಂತ ಕೊರೊನಾ ಸೋಂಕು ವ್ಯಾಪಿಸಿದ ಬೆನ್ನಲ್ಲೇ ಲಕ್ಷಾಂತರ ಮಂದಿ ಭಾರತಕ್ಕೆ ವಾಪಾಸಾಗಿದ್ದಾರೆ.

ಆದ್ರೀಗ ಗಲ್ಪ್ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಯುಎಇ ಈಗಾಗಲೇ ಉದ್ಯೋಗಕ್ಕಾಗಿ ತನ್ನ ದೇಶದಲ್ಲಿ ನೆಲೆಸಿರುವ ವಿದೇಶಿಗರು ಕೂಡಲೇ ದೇಶವನ್ನು ತೊರೆಯುವಂತೆ ಸೂಚನೆಯನ್ನು ನೀಡಿತ್ತು.

ಅಲ್ಲದೇ ಭಾರತ ಸರಕಾರಕ್ಕೂ ಕೂಡ ಈ ಕುರಿತು ಮಾಹಿತಿಯನ್ನು ನೀಡಿತ್ತು. ಹೀಗಾಗಿ ಗಲ್ಪ್ ರಾಷ್ಟ್ರಗಳಲ್ಲಿ ನೆಲೆಸಿರುವ ಸುಮಾರು ಶೇ.70ರಷ್ಟು ಮಂದಿ ತಾಯ್ನಾಡಿಗೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ. ಮಾತ್ರವಲ್ಲ ರಾಯಭಾರ ಕಚೇರಿಗಳನ್ನು ಸಂಪರ್ಕ ಮಾಡೋ ಕಾರ್ಯವನ್ನೂ ಮಾಡಲಾಗುತ್ತಿದೆ.

ಇನ್ನು ಕೇಂದ್ರ ಸರಕಾರ ಕೂಡ ವಿದೇಶಗಳಲ್ಲಿ ನೆಲೆಸಿರುವ ತನ್ನ ಪ್ರಜೆಗಳನ್ನು ವಾಪಾಸ್ ಕರೆತರುವ ನಿಟ್ಟಿನಲ್ಲಿಯೂ ಚಿಂತನೆ ನಡೆಸಿದೆ. ವಾಯುಸೇವೆಯ ವಿಮಾನ, ಏರ್ ಇಂಡಿಯಾ ವಿಮಾನ ಹಾಗೂ ನೌಕಾಪಡೆಯ ಹಡಗುಗಳನ್ನು ಬಳಸಿ ಗಲ್ಪ್ ರಾಷ್ಟ್ರದಲ್ಲಿ ನೆಲೆಸಿರುವವನ್ನು ಕರೆತರಲು ಮುಂದಾಗಿದೆ ಎನ್ನಲಾಗುತ್ತಿದೆ.

ಈಗಾಗಲೇ ನೌಕಾಪಡೆ ಹಾಗೂ ವಾಯುಪಡೆಗೆ ಸೂಚನೆಯನ್ನು ನೀಡಿದೆ ಅನ್ನೋ ಮಾಹಿತಿಯೂ ಹರಿದಾಡುತ್ತಿದೆ. ಗಲ್ಪ್ ರಾಷ್ಟ್ರಗಳಲ್ಲಿ ನೆಲೆಸಿರುವವರನ್ನು ವಿವಿಧ ರೀತಿಯಲ್ಲಿ ವಿಂಗಡಿಸಲಾಗುತ್ತಿದ್ದು, ಉದ್ಯೋಗಕ್ಕಾಗಿ ತೆರಳಿದವರು ಹಾಗೂ ವೀಸಾ ಅವಧಿ ಮುಗಿದವರನ್ನು ಮೊದಲ ಹಂತದಲ್ಲಿ ಭಾರತಕ್ಕೆ ಕರೆತರಲಾಗುತ್ತಿದ್ದು, ಪ್ರವಾಸಕ್ಕಾಗಿ ತೆರಳಿರುವವರನ್ನು ಅಂತಿಮವಾಗಿ ಕರೆತರಲಾಗುತ್ತದೆ.

ಹೀಗಾಗಿ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಕೂಡಲೇ ರಾಯಭಾರ ಕಚೇರಿಗಳನ್ನು ಸಂಪರ್ಕ ಮಾಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.

ಕೇಂದ್ರ ಸರಕಾರ ವಿದೇಶಗಳಲ್ಲಿ ನೆಲೆಸಿರುವ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರುವುದು ಅಷ್ಟು ಸುಲಭದ ಕೆಲವಲ್ಲ. ಕೇವಲ ಗಲ್ಪ್ ರಾಷ್ಟ್ರಗಳಲ್ಲಿಯೇ ಕೋಟ್ಯಾಂತರ ಮಂದಿ ಭಾರತೀಯರು ನೆಲೆಸಿದ್ದಾರೆ. ಯುಎಇಯಲ್ಲಿ 34.20 ಲಕ್ಷ, ಕುವೈತ್ ನಲ್ಲಿ 8.25 ಲಕ್ಷ, ದುಬೈನಲ್ಲಿ 22 ಲಕ್ಷ, ಕತ್ತಾರ್ ನಲ್ಲಿ 6.9 ಲಕ್ಷ, ಓಮನ್ ನಲ್ಲಿ 4.48 ಲಕ್ಷ, ಬೆಹರಿನ್ ನಲ್ಲಿ 4 ಲಕ್ಷ ಹಾಗೂ ಸೌದಿ ಅರೇಬಿಯಾದಲ್ಲಿ ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಮಂದಿ ನೆಲೆಸಿದ್ದಾರೆ.

ಕೊರೊನಾ ಆರಂಭಕ್ಕೂ ಮುನ್ನ ದೇಶಕ್ಕೆ ಶೇ.30 ರಷ್ಟು ಮಂದಿ ವಾಪಾಸಾಗಿದ್ದರೂ ಕೂಡ ಸರಿ ಸುಮಾರು 50 ಲಕ್ಷಕ್ಕೂ ಅಧಿಕ ಮಂದಿಯನ್ನು ಭಾರತಕ್ಕೆ ಕರೆತರಬೇಕಿದೆ. ಆದರೆ ಅಷ್ಟೊಂದು ಸಂಖ್ಯೆಯ ಭಾರತೀಯರನ್ನು ತಾಯ್ನಾಡಿಗೆ ಕರೆ ತರೋದು ದೊಡ್ಡ ಸವಾಲು.

ಇನ್ನು ವಿಶ್ವದ ಸುಮಾರು 53 ರಾಷ್ಟ್ರಗಳಲ್ಲಿ ನೆಲೆಸಿರುವ ಸುಮಾರು 3,336 ಮಂದಿ ಭಾರತೀಯರಿಗೆ ಕೊರೊನಾ ಸೋಂಕಿದೆ. ಹಲವರು ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುವ ಮುನ್ನ ಕೇಂದ್ರ ಸರಕಾರ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಕೇಂದ್ರ ಸರಕಾರ ಎಲ್ಲಾ ರಾಜ್ಯಗಳಿಗೆ ಈಗಾಗಲೇ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಸೂಚನೆ ನೀಡಿದೆ. ಲಕ್ಷಾಂತರ ಮಂದಿಗೆ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.

ಕೇರಳ ಸರಕಾರ ಈಗಾಗಲೇ ತನ್ನ ರಾಜ್ಯದ ಜನರನ್ನು ಸ್ವದೇಶಕ್ಕೆ ಕರೆತಂದು ಕ್ವಾರಂಟೈನ್ ಮಾಡಲು ಒಪ್ಪಿಗೆ ಸೂಚಿಸಿದೆ. ಆದರೆ ಸುಪ್ರೀಂ ಕೋರ್ಟ್ ಕೊರೊನಾ ಮುಗಿಯುವವರೆಗೂ ವಿದೇಶದಲ್ಲಿದ್ದವರನ್ನು ಕರೆತರುವುದು ಸಾಧ್ಯವಿಲ್ಲವೆಂದು ಹೇಳಿತ್ತು. ಗಲ್ಪ್ ರಾಷ್ಟ್ರಗಳು ಭಾರತೀಯರನ್ನು ದೇಶ ಬಿಟ್ಟು ಹೋಗುವಂತೆ ಹೇಳಿರೋದು ಇದೀಗ ಆತಂಕ ಮೂಡಿಸಿದ್ದು, ವಿದೇಶದಲ್ಲಿ ನೆಲೆಸಿರುವವರು ತಮ್ಮನ್ನ ಸ್ವದೇಶಕ್ಕೆ ಕರೆತರುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲೇ ಬೇಕಾದ ಸಂದಿಗ್ದತೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಿಲುಕಿವೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular