ಬೆಂಗಳೂರು : ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮಹಿಳೆಯನ್ನು ಕೊರೊನಾ ತಪಾಸಣೆಗೆ ಒಳಪಡಿಸದೇ ನಿರ್ಲಕ್ಷ್ಯವಹಿಸಿರೋ ಆಸ್ಪತ್ರೆಯ ಲೈಸೆನ್ಸ್ ರದ್ದಾಗುವ ಸಾಧ್ಯತೆಯಿದ್ದು, ಕೊರೊನಾ ತಪಾಸಣೆ ನಡೆಸಿರುವ ವ್ಯಕ್ತಿಯ ವಿರುದ್ದವೂ ಪ್ರಕರಣ ದಾಖಲಾಗಿದೆ.

ಮೇ 6 ರಂದು ಬೆಂಗಳೂರು ನಗರದ ಹೆಣ್ಣೂರಿನ ನಿವಾಸಿಯಾಗಿರುವ 57 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಯಿಂದ ನಾರ್ತ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೇ 7ರಂದು ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಆದ್ರೆ ಶಂಕಿತ ಕೊರೊನಾ ರೋಗ ಲಕ್ಷಣಗಳಿದ್ದರು ಕೂಡ ನಾರ್ತ್ ಆಸ್ಪತ್ರೆಯ ವೈದ್ಯರು ಆಕೆಗೆ ಕೊರೊನಾ ತಪಾಸಣೆ ನಡೆಸಿರಲಿಲ್ಲ. ಆದ್ರೆ ಮಹಿಳೆ ಮೃತಪಟ್ಟ ನಂತರ ಮಹಿಳೆಯ ಗಂಟಲು ದ್ರವವನ್ನು ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.


ಈ ಹಿನ್ನೆಲೆಯಲ್ಲಿ ನಾರ್ತ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವೈದ್ಯರು, ಸಿಬ್ಬಂಧಿ ಸೇರಿದಂತೆ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿರುವ 25 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅಲ್ಲದೇ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವವರ ಮಾಹಿತಿಯನ್ನೂ ಕೂಡ ಕಲೆಹಾಕಲಾಗುತ್ತಿದೆ.

ಕೊರೊನಾ ವೈರಸ್ ಸೋಂಕಿನ ವಿಚಾರದಲ್ಲಿ ನಿರ್ಲಕ್ಷ್ಯವನ್ನು ವಹಿಸಿರುವ ನಾರ್ತ್ ಆಸ್ಪತ್ರೆಯ ಲೈಸೆನ್ಸ್ ರದ್ದು ಮಾಡುವಂತೆ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಅವರು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಮಾತ್ರವಲ್ಲ ಮಹಿಳೆಯ ಕೊರೊನಾ ತಪಾಸಣೆಯನ್ನು ಬೆಂಗಳೂರಿನಲ್ಲಿ ಮಾಡುವ ಬದಲು ಹೈದ್ರಾಬಾದ್ ನಲ್ಲಿ ನಡೆಸಿರುವ ವಿಚಾರದಲ್ಲಿಯೂ ಆರೋಗ್ಯ ಇಲಾಖೆ ಆಸ್ಪತ್ರೆಯ ವಿರುದ್ದ ಗರಂ ಆಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ತಪಾಸಣೆ ಮಾಡಿರುವ ವ್ಯಕ್ತಿಯ ವಿರುದ್ದವೂ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.