ಬೆಂಗಳೂರು : ವಿಶ್ವವನ್ನೇ ನಡುಗಿಸಿರೋ ಕೊರೊನಾ ವೈರಸ್ ಭೀತಿ ಇದೀಗ ಕರ್ನಾಟಕವನ್ನೂ ಕಾಡುತ್ತಿದೆ. ಕೊರೊನಾ ವೈರಸ್ ವಿರುದ್ದ ರಾಜ್ಯ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಚೀನಾದಿಂದ ರಾಜ್ಯಕ್ಕೆ ಬರೋ ಪ್ರಯಾಣಿಕರ ಮೇಲೆ ಹದ್ದಿನಕಣ್ಣು ಇರಿಸಲಾಗಿದೆ.

ಹೌದು, ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸಿರೋ ಕೊರೊನಾ ವೈರಸ್ ಭೀತಿ ರಾಜ್ಯವನ್ನು ಕಾಡುತ್ತಿದೆ. ಕೊರೊನಾ ವೈರಸ್ ವಿರುದ್ದ ರಾಜ್ಯದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಚೀನಾ ದೇಶದಿಂದ ರಾಜ್ಯಕ್ಕೆ ಆಗಮಿಸೋ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಈಗಾಗಲೇ ಸುಮಾರು 2,572 ಕ್ಕೂ ಅಧಿಕ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ನಿತ್ಯವೂ 300 – 400 ಮಂದಿಯನನ್ನು ತಪಾಸಣೆ ಮಾಡಲಾಗುತ್ತಿದೆ. ಆದರೆ ಇದುವರೆಗೂ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿಲ್ಲ.

ಈಗಾಗಲೇ ಚೀನಾ ಪ್ರವಾಸ ಮುಗಿಸಿ ಹಿಂದಿರುಗಿದ್ದ ನಾಲ್ವರು ಪ್ರಯಾಣಿಕರ ರಕ್ತದ ಮಾದರಿಗಳನ್ನು ಶಂಕೆಯ ಮೇರೆಗೆ ತಪಾಸಣೆಗೆ ಒಳಪಡಿಸಲಾಗಿದೆ. ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.