ಮಂಗಳೂರು : ದೇಶದಾದ್ಯಂತ ಕಿಚ್ಚು ಹೊತ್ತಿಸಿರೋ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮಂಗಳೂರಲ್ಲಿಂದು ಬೃಹತ್ ಜನಜಾಗೃತಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳೋ ಮೂಲಕ ಕೇಂದ್ರ ಸರಕಾರಕ್ಕೆ ಬೆಂಬಲ ಸೂಚಿಸಲಾಯಿತು.

ಮಂಗಳೂರು ಹೊರವಲಯದ ಗೋಲ್ಡನ್ ಪಿಂಚ್ ಸಿಟಿ ಮೈದಾನದಲ್ಲಿ ನಡೆದ ಸಿಎಎ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಪ್ಪು ಸಂದೇಶ ರವಾನಿಸುತ್ತಿರುವವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಮುಸ್ಲೀಮರಲ್ಲಿ ಎನ್ ಪಿಆರ್ ಹಾಗೂ ಎನ್ ಸಿಆರ್ ಬಗ್ಗೆ ಭಯ ಮೂಡಿಸಲಾಗುತ್ತಿದೆ. ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಮುಸ್ಲೀಮರೇ ಕೇಂದ್ರ ಸರಕಾರ ನಿಮಗೆ ರಕ್ಷಣೆಯನ್ನು ನೀಡುತ್ತದೆ. ದೇಶದ ಮುಸ್ಲೀಮರ ಎಲ್ಲಾ ಪಂಗಡಗಳಿಗೆ ರಕ್ಷಣೆಯಿದೆ ಹೆದರಬೇಡಿ. ವಿರೋಧ ಪಕ್ಷದವರು ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ದೇಶದಲ್ಲಿ ಸ್ವದೇಶಿ, ವಿದೇಶಿ ಜನರು ಯಾರು ಅಂತಾ ಗೊತ್ತಾಗಬೇಕು. ದೇಶದ ಮುಸ್ಲೀಮರಲ್ಲಿ ಜಾಗೃತಿ ಮೂಡಿಸೋಣಾ. ಮುಸ್ಲಿಂ ದೇಶವಾಸಿಗಳೇ ನಾವು ನಿಮ್ಮ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಭಾರತ ಯಾರ ತಂಟೆಗೂ ಹೋಗೋದಿಲ್ಲ. ಆದರೆ ನಮ್ಮ ತಂಟೆಗೆ ಬಂದ್ರೆ ಬಿಡೋದಿಲ್ಲಾ ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯು ಮಹಾತ್ಮಗಾಂಧಿ ಕನಸಾಗಿತ್ತು. ಗಾಂಧಿ ಕನಸನ್ನು ಬಿಜೆಪಿ ಪೂರೈಸಿದೆ. ಮನಮೋಹನ್ ಸಿಂಗ್ ಕೂಡ ಸಂಸತ್ ನಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು. ಲೋಕಸಭೆಯಲ್ಲಿ ಮನಮೋಹನ್ ಸಿಂಗ್ ಹೇಳಿದ್ದ ಮಾತಿಗೆ ಕಾಂಗ್ರೆಸ್ ಏನು ಹೇಳುತ್ತದೆ. ಕೇಂದ್ರದ ಕಾನೂನನ್ನು ತಿರಸ್ಕರಿಸಬಾರದು. ಭಾರತ ಇಸ್ಲಾಮಿಕ್ ರಾಷ್ಟ್ರವಲ್ಲ. ಸೆಕ್ಯೂಲರ್ ದೇಶ, ಭಾರತ ಬಹು ಸಂಸ್ಕೃತಿಯುಳ್ಳ ದೇಶ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಜೆಪಿಯ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

ಹರಿದು ಬಂತು ಜನಸಾಗರ
ಮಂಗಳೂರು ನಗರದ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಸಮಾವೇಶಕ್ಕೆ ಜನಸಾಗರವೇ ಹರಿದಬಂದಿದೆ.

ಸಮಾವೇಶಕ್ಲಕೆ ಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು. ಸಮಾವೇಶದ ಹಿನ್ನೆಲೆಯಲ್ಲಿ ಬಂದರು ನಗರಿ ಮಂಗಳೂರು ಸಂಪೂರ್ಣವಾಗಿ ಸ್ತಬ್ದವಾಗಿತ್ತು. ರಾಷ್ಟ್ರೀಯ ಹೆದ್ದಾರಿ 33 ರಲ್ಲಿ ಕೆಲ ಹೊತ್ತು ಜಾಮ್ ಆಗಿತ್ತು.