ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಿರೋ ನಾಡೋಜಾ ಡಾ.ಜಿ.ಶಂಕರ್ ಅವರು ಇದೀಗ ಕೊರೊನಾ ಸೋಂಕಿನಿಂದ ತತ್ತರಿಸಿರುವ ದಕ್ಷಿಣ ಕನ್ನಡ ಜಿಲ್ಲೆಗೂ ತಮ್ಮ ಸಮಾಜ ಸೇವಾ ಕಾರ್ಯಗಳನ್ನು ವಿಸ್ತರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ 7 ಲಕ್ಷ ಮೌಲ್ಯದ ಜೀವರಕ್ಷಕ ಪರಿಕರಗಳನ್ನು ವಿತರಿಸಿದ್ದಾರೆ. N95 ಮಾಸ್ಕ್, ಟ್ರಿಪಲ್ ಲೇಯರ್ ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಗಳನ್ನು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನೀಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಅವರಿಗೆ ಹಸ್ತಾಂತರಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಕೊರೊನಾ ಯೋಧರ ಆರೋಗ್ಯ ಕಾಯುವಲ್ಲಿ ಡಾ.ಜಿ.ಶಂಕರ್ ಅವರ ಸೇವೆ ಅನನ್ಯವಾದುದು.

ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಾಗಲೇ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಅವರ ಸೇವೆಯನ್ನು ವಿಸ್ತರಿಸಿರುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಡಾ.ಜಿ.ಶಂಕರ್ ಅವರ ಸೇವೆ ಅನನ್ಯವಾದುದು. ಬಡವರು, ರಿಕ್ಷಾ ಚಾಲಕರು, ಮೀನುಗಾರರು ಸೇರಿದಂತೆ ಎಲ್ಲಾ ಸಮುದಾಯದವರಿಗೆ ನೆರವಾಗಿರುವ ಜಿ.ಶಂಕರ್ ಅವರು ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವಿರುದ್ದ ಹೋರಾಟ ಮಾಡುವವರಿಗೆ ಜೀವರಕ್ಷಕ ಪರಿಕರಗಳನ್ನು ವಿತರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿ.ಶಂಕರ್ ಅವರಿಂದ ಇನ್ನಷ್ಟು ಸಮಾಜ ಸೇವಾ ಕಾರ್ಯಗಳು ನಡೆಯುವಂತಾಗಲಿ ಎಂದಿದ್ದಾರೆ.

ದಕ್ಷಿಣ ಕನ್ನಡ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಶಿವರಾಮ ಕೆ.ಎಂ., ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.