ಬ್ರಹ್ಮಾವರ : ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗೆ ಒಂದು ಕಾಲದಲ್ಲಿ ಪ್ರೌಢಶಿಕ್ಷಣ ಎನ್ನುವುದು ಕಷ್ಟ ಸಾಧ್ಯವಾಗಿತ್ತು. ಅದರಲ್ಲೂ ಓದುವ ಹಂಬಲವಿದ್ದು, ಪ್ರಾಥಮಿಕ ಶಿಕ್ಷಣವನ್ನು ಮುಗಿಸಿಕೊಂಡು ದೂರದ ದೂರಿಗೆ ಹೋಗಿ ಹಣಕೊಟ್ಟು ಖಾಸಗಿ ಶಾಲೆಗಳಲ್ಲಿ ಮುಂದಿನ ಶಿಕ್ಷಣ ಪಡೆಯಲು ಬಡತನ ತಡೆಗೋಡೆ ಆಗಿತ್ತು. ಇಂತಹ ಸಂದರ್ಭದಲ್ಲಿಯೇ ಮಕ್ಕಳ ಓದಿಗೆ ದಾರಿದೀಪವಾಗುವಂತೆ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಮುಂದುವರೆಸಿದ್ದು, ಮಕ್ಕಳ ಪಾಲಿಗೆ ಅದೃಷ್ಟವೇ ಸರಿ. ಕಳೆದ ಇಪ್ಪತೈದು ವರ್ಷಗಳ ಹಿಂದೆ ಆರಂಭಗೊಂಡ ಶಾಲೆ ಇದೀಗ ರಜತಮಹೋತ್ಸವದ (Government high school vaddarse) ಸಂಭ್ರಮವನ್ನುಆಚರಿಸಿಕೊಳ್ಳುತ್ತಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯಲ್ಲಿ ಮೊದಲು ಒಂದರಿಂದ ಏಳನೇ ತರಗತಿಯವರೆಗೆ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿತ್ತು, ನಂತರ ಸ್ಥಳೀಯರ ಸಹಾಯದೊಂದಿಗೆ 1996ರಲ್ಲಿ ಪ್ರೌಢಶಿಕ್ಷಣವನ್ನು ಸೇರ್ಪಡೆಗೊಳಿಸಿದ್ದು, ನಂತರ ಮಕ್ಕಳ ವಿದ್ಯಾಭ್ಯಾಸ ಅಲ್ಲಿಗೆ ಕುಂಠಿತಗೊಳ್ಳದಂತೆ ಪ್ರೋತ್ಸಾಹ ನೀಡಿದ್ದಾರೆ. ಈ ಸರಕಾರಿ ಪ್ರೌಢಶಾಲೆ ಇದುವರೆಗೂ ಸಾವಿರಾರು ವಿದ್ಯಾರ್ಥಿಗಳನ್ನು ಸುಸಂಸ್ಕೃತ, ವಿದ್ಯೋನ್ನತ ಘನತೆಯಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆಯಾಗಿ ನೀಡಿದೆ.
ಬೆಳ್ಳಿ ಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವ ವಡ್ಡರ್ಸೆ ಸರಕಾರಿ ಪ್ರೌಢಶಾಲೆ ಕೇವಲ ಶಿಕ್ಷಣವಷ್ಟೇ ಅಲ್ಲದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ್ದಾರೆ. ಏಳನೇ ತರಗತಿ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ದೂರದ ಪಟ್ಟಣಕ್ಕೆ ಹೋಗಿ ಖಾಸಗಿ ಶಾಲೆಗೆ ಹಣ ಕೊಟ್ಟು ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೇ ಕೃಷಿ, ಹೋಟೆಲ್, ಸೇರಿದಂತೆ ಬೇರೆ ಉದ್ಯೋಗದಲ್ಲಿ ತೊಡಬೇಕಾದ ಅನಿವಾರ್ಯತೆಯ ಹೊತ್ತಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಜೀವಿನಿಯಾಗಿ ಪರಿಣಮಿಸಿದೆ.
ಒಂದು ಸುಂದರ ಗ್ರಾಮೀಣ ಸೊಗಡಿನ, ಹಳ್ಳಿ ಸೊಗಸಿನ ಸಾಮರಸ್ಯದ ಪರಿಸರ. ಇಲ್ಲಿ ಹುಟ್ಟಿ ಬೆಳೆದ ಬಡ, ಮಧ್ಯಮವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಈ ಶಾಲೆ ಅಕ್ಕರೆಯಿಂದ ಕರೆದು ಅಕ್ಷರದಾನ ಮಾಡಿದೆ. ಇಲ್ಲಿ ವಿದ್ಯಾಭ್ಯಾಸವನ್ನು ಪಡೆದವರು ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿ ಶಾಲೆಗೂ ಕೀರ್ತಿ ತಂದಿದ್ದಾರೆ. ಈ ವಿದ್ಯಾಮಂದಿರವನ್ನು ಬೆಳೆಸಿ, ಬೆಳಗಿಸಿದ ಮಹಾನ್ ಕರ್ತವ್ಯನಿಷ್ಠೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸರ್ವ ಶಿಕ್ಷಕರೂ ಪಾತ್ರ ಮಹತ್ವದ್ದು. ಪ್ರಾಮಾಣಿಕವಾಗಿ ಶಿಕ್ಷಕರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಇದೀಗ ರಜತ ಮಹೋತ್ಸವಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿಗಳು ಹಾಗೂ ಊರಿನ ಸಮಸ್ತರು ಕೂಡ ಶ್ರಮಿಸುತ್ತಿದ್ದಾರೆ.
ಈ ರಜತ ಮಹೋತ್ಸವ ಸಂಭ್ರಮಾರಣೆ ಸಂದರ್ಭದಲ್ಲಿ ಕೇಂದ್ರ ಬಿಂದು ಎನ್ನುವಂತೆ ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಸಹಾಯವಾಗಲೆಂದು ಅಕ್ಷರ ಅಂಬಾರಿಯನ್ನು ಕೊಡುಗೆಯಾಗಿ ದಾನಿ ಒಬ್ಬರು ನೀಡಿದ್ದಾರೆ. ಅವರು ಬೇರೆ ಯಾರು ಅಲ್ಲ ಡಾ. ಎನ್. ಸೀತಾರಾಮ ಶೆಟ್ಟಿ ಚೇರ್ಮೆನ್ ಆಫ್ ಶಂಕರನಾರಾಯಣ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು. ಹೌದು ಈ ರಜತ ಪರ್ವದಂದು ಶ್ರೀಯುತರು ಅಕ್ಷರ ಅಂಬಾರಿಯನ್ನು ಕೊಡುಗೆಯಾಗಿ ಹಸ್ತಾಂತರ ಮಾಡಲಿದ್ದಾರೆ.
ಡಿಸೆಂಬರ್ 30 ರಂದು ರಜತ ಮಹೋತ್ಸವ ಸಮಾರಂಭ ನಡೆಯಲಿದೆ. ಗುರು ವಂದನೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಸಂಜೆ ನಡೆಯುವ ಗುರುವಂದನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಲ್. ಭೋಜೇಗೌಡ, ತೇಜಸ್ವಿನಿ ಗೌಡ, ವಿಧಾನ ಪರಿಷತ್ ಶಾಸಕರು ಶ್ರೀ ಮಂಜುನಾಥ ಭಂಡಾರಿ, ಮೈಸೂರು ಎಲೆಕ್ಟ್ರಿಲ್ ಇಂಡಸ್ಟ್ರಿಸ್ ಲಿಮಿಟೆಡ್ ಚಯರ್ಮನ್ ಶ್ರೀ ಉದಯ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಪ್ರವರ್ತಕರು, ಗೀತಾನಂದ ಫೌಂಡೇಶನ್ ಮಣೂರು, ಶ್ರೀ ಅನಂದ ಕುಂದರ್, ಆಡಳಿತ ಮೊಕ್ತೇಸರರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವಡ್ಡರ್ಸೆ ಶ್ರೀ ಉದಯ ಕುಮಾರ್ ಶೆಟ್ಟಿ, ಮನಸ್ವಿನಿ ಚಾರಿಟೇಬಲ್ ಟ್ರಸ್ಟ್ ಡಾ. ಪ್ರಕಾಶ್ ತೋಳಾರ್, ಅಧ್ಯಕ್ಷರು ಸ್ಥಾಪನಾ ಸಮಿತಿ ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಶ್ರೀ ಭೋಜ ಹಗ್ಡೆ ಬನ್ನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬ್ರಹ್ಮಾವರ ವಲಯ ಶ್ರೀ. ಕೆ ರಂಗನಾಥ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : Annual day celebration: “ಹೇರಾಡಿ -ಬಾರಕೂರು ಶ್ರೀ ವಿದ್ಯೇಶ ವಿದ್ಯಾ ಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ “
ಬೆಳಿಗ್ಗೆ 8.30ಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆಯಿಂದ ಪ್ರೌಢಶಾಲೆಯವರೆಗೆ ರಜತ ಮಹೋತ್ಸವದ ಮೆರವಣಿಗೆ, 9 ಗಂಟೆಗೆ ಗ್ರಾಮ ಪಂಚಾಯತ್ ವಡ್ಡರ್ಸೆ ಅಧ್ಯಕ್ಷರು ಶ್ರೀಮತಿ ರಮ್ಯ ಅವರಿಂದ ಧ್ವಜಾರೋಹಣ, 9.30 ರಿಂದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ, ಸಂಜೆ 5ರಿಂದ ಅಂಗನವಾಡಿ ವಿದ್ಯಾರ್ಥಿಗಳಿಂದ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.30ರಿಂದ ಸರಕಾರಿ ಪ್ರೌಢಶಾಲೆ ವಡ್ಡರ್ಸೆ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ ಮತ್ತು ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
Government High School Vaddarse on Silver Jubilee