ಉಡುಪಿ : ವಿಶ್ವವನ್ನೇ ಬೆಚ್ಚಿಬೀಳಿಸಿರೋ ಕೊರೊನಾ ವೈರಸ್ ಭೀತಿ ಇದೀಗ ಕರಾವಳಿಗರನ್ನು ಕಾಡುತ್ತಿದೆ. ಇತ್ತೀಚಿಗಷ್ಟೇ ಚೀನಾದಿಂದ ವಾಪಾಸಾಗಿದ್ದ ಉಡುಪಿ ಜಿಲ್ಲೆಯ ನಾಲ್ವರನ್ನು ಸಂಶಯಾಸ್ಪದ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದೆರಡು ವಾರಗಳ ಹಿಂದೆ ಬ್ರಹ್ಮಾವರ ಮೂಲದ ದಂಪತಿ ಮಗುವಿನೊಂದಿಗೆ ಚೀನಾದಿಂದ ತೆರಳಿ ವಾಪಾಸಾಗಿದ್ದರು. ಮೂವರ ಪೈಕಿ ಪತಿ ಶೀತ ಹಾಗೂ ಕೆಮ್ಮದಿಂದ ಬಳಲುತ್ತಿದ್ರೆ, ಮಗುವಿಗೆ ಸಣ್ಣ ಪ್ರಮಾಣದ ಶೀತವಿದೆ. ಆದ್ರೆ ಪತ್ನಿ ಆರೋಗ್ಯವಾಗಿದ್ದಾರೆ. ಇನ್ನು ಕಾಪು ನಿವಾಸಿ ಕಳೆದ 15 ದಿನಗಳ ಹಿಂದೆ ಚೀನಾದಿಂದ ಮರಳಿದ್ದರು. ಅವರಿಗೆ ಇತ್ತೀಚಿಗೆ ಶೀತ ಹಾಗೂ ಗಂಟಲು ಸೋಂಕು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನಾಲ್ವರನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿರಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ನಾಲ್ವರ ಗಂಟಲು ಹಾಗೂ ರಕ್ತದ ದ್ರವದ ಸ್ಯಾಂಪಲ್ ಗಳನ್ನು ಕೊರೊನಾ ವೈರಸ್ ಪತ್ತೆಗಾಗಿ ಲ್ಯಾಬ್ ಗೆ ಕಳುಹಿಸಿಕೊಡಲಾಗಿದ್ದು, ಲ್ಯಾಬ್ ರಿಪೋರ್ಟ್ ಗಾಗಿ ವೈದ್ಯರು ಕಾಯುತ್ತಿದ್ದಾರೆ. ಆದರೆ ನಾಲ್ವರು ಕೂಡ ಆರೋಗ್ಯವಾಗಿದ್ದಾರೆಂದು ಹೇಳಲಾಗುತ್ತಿದೆ.

ಚೀನಾದಲ್ಲಿ ಕೊರೊನಾ ಮರಣ ಮೃದಂಗವನ್ನೇ ಬಾರಿಸುತ್ತಿದೆ. ವಿಶ್ವವೇ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ರೆ ಚೀನಾದಿಂದ ತಾಯ್ನಾಡಿಗೆ ವಾಪಾಸಾಗಿರುವವರ ಕುರಿತ ಮಾಹಿತಿಯನ್ನು ಕಲೆಹಾಕೋ ಕಾರ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಬೇಕಿದೆ. ಜನರಿಗೆ ಕೊರೊನಾ ಕುರಿತು ಅರಿವು ಮೂಡಿಸೋ ಕಾರ್ಯವನ್ನು ಮಾಡದೇ ಇದ್ರೆ ಜನ ಭೀತಿಯಲ್ಲಿಯೇ ಬದುಕುವ ಸ್ಥಿತಿ ನಿರ್ಮಾಣವಾಗಲಿದೆ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ನಿದ್ದೆಯಿಂದ ಎದ್ದೇಳಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿಲ್ಲ ಹೀಗಾಗಿ ಜನ ಭಯ ಪಡೋ ಅಗತ್ಯವಿಲ್ಲ. ಆದರೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ತೀರಾ ಒಳಿತು.