ನವದೆಹಲಿ : ಗುಜರಾತ್ ನಲ್ಲಿ 2002ರಲ್ಲಿ ನಡೆದಿದ್ದ ಗಲಭೆ ಪ್ರಕರಣದ 17 ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. 2002ರ ಫೆಬ್ರವರಿ 27 ರಂದು ಗುಜರಾತಿನ ಗೋಧ್ರಾದಲ್ಲಿ ಸಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ರೈಲಿನಲ್ಲಿದ್ದ ಹಿಂದೂ ಪ್ರಯಾಣಿಕರು ಸಾವನ್ನಪ್ಪಿದ್ದರು. ಇದಾದ ಬಳಿಕ ಸರ್ದಾರ್ಪುರ್ ಗ್ರಾಮದಲ್ಲಿ ಉಂಟಾದ ಗಲಭೆಯಲ್ಲಿ 33 ಮುಸ್ಲೀಮರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಬಂಧಿತರಾಗಿದ್ದ 17 ಆರೋಪಿಗಳಿಗೆ ಇದೀಗ ಜಾಮೀನು ಮಂಜೂರಾಗಿದೆ.

ಸುದೀರ್ಘವಾಗಿ ವಾದ ವಿವಾದ ಆಲಿಸಿರುವ ಸುಪ್ರೀಂ ಕೋರ್ಟ್ ಅಪರಾಧಿಗಳನ್ನು ಇಂದೋರ್ ಹಾಗೂ ಜಬಲ್ಪುರ್ ಎರಡು ಗುಂಪುಗಳಾಗಿ ಮಾಡಿದೆ. ಅಪರಾಧಿಗಳು ಗುಜರಾತ್ ರಾಜ್ಯವನ್ನು ಪ್ರವೇಶಿಸುವಂತಿಲ್ಲ. ಮಾತ್ರವಲ್ಲ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಷರತ್ತು ವಿಧಿಸಿದೆ. ಇದಕ್ಕೂ ಮುನ್ನ ಅಪರಾಧಿಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆ ಮಾಡುವುದರ ಕುರಿತು ಖಚಿತಪಡಿಸುವಂತೆ ಮಧ್ಯಪ್ರದೇಶದ ಇಂದೋರ್ ಮತ್ತು ಜಬಲ್ಪುರ್ನ ಜಿಲ್ಲಾ ಕಾನೂನು ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ, ಅಪರಾಧಿಗಳು ಜೀವನೋಪಾಯಕ್ಕೆ ಕೆಲಸ ಹುಡುಕಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಅಪರಾಧಿಗಳ ನಡತೆಯ ಮೇಲೆ ಅನುಸರಣಾ ವರದಿಯನ್ನು ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಕೇಳಿದೆ.