ಗೃಹಸಚಿವರ ರಾಜೀನಾಮೆಗೆ ಆಗ್ರಹಿಸಿ ಎಸ್ ಡಿಪಿಐ ಪ್ರತಿಭಟನೆ

0

ಬೆಳ್ತಂಗಡಿ : ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರೋ ಪ್ರಕರಣದ ಷಡ್ಯಂತ್ರವನ್ನು ಬಯಲಿಗೆಳೆಯಬೇಕೆಂದು ಎಸ್ ಡಿಪಿಐ (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಆಗ್ರಹಿಸಿದೆ. ಪ್ರಕರೌನ್ನು ಸರಕಾರ, ಪೊಲೀಸರು ಮತ್ತು ಕೆಲ ಮಾಧ್ಯಮಗಳು ಮುಚ್ಚಿ ಹಾಕಲು ಯತ್ನಿಸುತ್ತಿವೆ ಎಂದು ಆರೋಪಿಸಿ ಎಸ್ ಡಿಪಿಐ ಕಾರ್ಯಕರ್ತರು ಬೆಳ್ತಂಗಡಿಯ ಮಿನಿವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಆರೋಪಿ ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಅಂತಾ ಹೇಳಿಕೆ ನೀಡಿರುವುದನ್ನು ಖಂಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಪರೀಕ್ಷಿಸುತ್ತಾರೆ. ಹೀಗಿದ್ದರೂ ವಿಮಾನ ನಿಲ್ದಾಣದಲ್ಲಿ ಬ್ಯಾಗ್ ನಲ್ಲಿ ಬಾಂಬ್ ನ್ನು ಹೇಗೆ ಕೊಂಡು ಹೋದ. ನಿಜಕ್ಕೂ ಇದು ಪೊಲೀಸ್ ವ್ಯವಸ್ಥೆ ಹಾಗೂ ರಕ್ಷಣಾ ವ್ಯವಸ್ಥೆಯ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯತನ ಎಂದಿದ್ದಾರೆ. ಸಚಿವರಾಗಿರೋ ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಷಿಯಂತಹ ರಾಜಕಾರಣಿಗಳು ತನಿಖೆಗೆ ಮೊದಲೇ ಮಂಗಳೂರಲ್ಲಿ ಗಲಭೆ ಮಾಡಿದವರ ಕೃತ್ಯವೆನ್ನುತ್ತಾರೆ. ಇಲ್ಲ ಸಲ್ಲದ ಬೇಜವಾಬ್ದಾರಿಯುತ ಮಾತುಗಳನ್ನು ಆಡುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದ್ರೆ ಪ್ರಕರಣದ ದಿಕ್ಕು ಬದಲಾಯಿಸುತ್ತಿರುವುದು ಅರಿವಾಗುತ್ತಿದೆ. ಹೀಗಾಗಿ ಪ್ರಕರಣಕ್ಕೆ ಕಾರಣರಾದವರ ವಿರುದ್ದ ಕಠಿಣಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷ ನವಾಝ್ ಶರೀಫ್, ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಅಧ್ಯಕ್ಷ ಮುಸ್ತಫಾ ಜಿ ಕೆ, ಗ್ರಾಮ ಪಂಚಾಯತ್ ಸದಸ್ಯ ಶುಕೂರ್ ಕುಪ್ಪೆಟ್ಟಿ, ರಿಯಾಜ್ ಮದ್ದಡ್ಕ, ನಿಝಾಮ್ ಗೇರುಕಟ್ಟೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.