ಮಂಗಳೂರು : ಗುರುಪುರ ಸಮೀಪದ ಬಂಗ್ಲೆಗುಡ್ಡೆಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳು ಸಾವನ್ನಪ್ಪಿದ್ದಾರೆ. ಸುಮಾರು 4 ಗಂಟೆಗಳಿಗೂ ಅಧಿಕ ಕಾಲ ಕಾರ್ಯಾಚರಣೆಯನ್ನು ನಡೆಸಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆಯುವಲ್ಲಿ ಎನ್ ಡಿಆರ್ ಎಫ್ ತಂಡ ಯಶಸ್ವಿಯಾಗಿದೆ. ಆದರೆ 16 ವರ್ಷ ಸಫ್ವಾನ್ ಹಾಗೂ 10 ವರ್ಷದ ಸಹಲಾ ಮಾತ್ರ ಬದುಕಿ ಬರಲಿಲ್ಲ.

ಮಧ್ಯಾಹ್ನ 12.30ರ ಸುಮಾರಿಗೆ ಬಂಗ್ಲೆ ಗುಡ್ಡೆಯಲ್ಲಿ ಗುಡ್ಡ ಕುಸಿತವಾಗಿತ್ತು. ಗುಡ್ಡ ಕುಸಿತದಿಂದಾಗಿ 2 ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದ್ರೆ ಇನ್ನೂ 5 ಮನೆಗಳು ಕುಸಿತದ ಭೀತಿಯಲ್ಲಿವೆ. ಗುಡ್ಡ ಕುಸಿತದ ವೇಳೆಯಲ್ಲಿ ಸಫ್ವಾನ್ ಮತ್ತು ಸಹಲಾ ಮಣ್ಣಿನಡಿಯಲ್ಲಿ ಸಿಲುಕಿದ್ದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಎನ್ ಡಿಆರ್ ಎಫ್ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಸುಮಾರು 3 ಗಂಟೆಗಳಿಂದಲೂ ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ. ಕಾರ್ಯಾಚರಣೆ ಇದೀಗ ಮಕ್ಕಳು ಸಿಲುಕಿರುವ ಮನೆಯ ಮೇಲಿದ್ದ ಮಣ್ಣನ್ನು ತೆಗೆಯುವಲ್ಲಿ ಯಶಸ್ವಿಯಾದ್ರೂ ಕೂಡ ಮಕ್ಕಳನ್ನು ಬದುಕಿಸಲು ಸಾಧ್ಯವಾಗಲಿಲ್ಲ.

ಮಣ್ಣಿನಡಿಯಲ್ಲಿ ಸಿಲುಕಿರುವ ಬಾಲಕರು ಗುರುಪುರ ನಿವಾಸಿಗಳಾಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಮಾವನ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಗುಡ್ಡ ಕುಸಿತವಾಗಿದೆ. ಈ ವೇಳೆಯಲ್ಲಿ ಅಕ್ಕ ಪಕ್ಕದ ಮನೆಯವರು ಓಡಿ ಹೊರಗೆ ಬಂದ್ರೂ ಕೂಡ ಬಾಲಕರಿಗೆ ಗುಡ್ಡ ಕುಸಿತವಾಗುತ್ತಿರುವುದು ಅರಿವಿಗೆ ಬಾರದಾಗಿತ್ತು. ಹೀಗಾಗಿ ಮಕ್ಕಳು ಮನೆಯೊಳಗೆ ಸಿಲುಕಿದ್ದಾರೆ. ಮನೆಯ ಮೇಲೆ ಸುಮಾರು 30 ಅಡಿಗಳಷ್ಟು ಗುಡ್ಡದ ಮಣ್ಣು ಬಿದ್ದಿದ್ದು, ಮಣ್ಣನ್ನು ಜೆಸಿಬಿ ಯಂತ್ರಗಳ ಮೂಲಕ ಸ್ಥಳಾಂತರ ಮಾಡುವ ಕಾರ್ಯವನ್ನು ಮಾಡಲಾಗಿದೆ.

ಈ ನಡುವಲ್ಲೇ ಬಂಗ್ಲೆ ಗುಡ್ಡೆಯಲ್ಲಿದ್ದ ಸುಮಾರು 15 ಮನೆಗಳಲ್ಲಿ ವಾಸ ಮಾಡುತ್ತಿದ್ದ 30 ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಗುಡ್ಡ ಕುಸಿತದಿಂದ ರಕ್ಷಾವೊಂದು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ರೆ, ಲಾರಿಯೊಂದು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದೆ. ಮನೆ ಕಳೆದುಕೊಂಡಿರುವವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮಡಿಕೇರಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸಿದಂತೆಯೇ ಬಂಗ್ಲೆಗುಡ್ಡೆಯ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆಯನ್ನು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ನೀಡಿದ್ದಾರೆ.