ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದು ಮೂರು ತಿಂಗಳು ಕಳೆದಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ಇದುವರೆಗೂ ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ನಡೆದಿರಲಿಲ್ಲ. ಇದೀಗ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣಾ ದಿನಾಂಕ ಫಿಕ್ಸ್ ಆಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಬಾರೀ ಜಯಗಳಿಸಿತ್ತು. 60 ಸ್ಥಾನಗಳನ್ನು ಹೊಂದಿರುವ ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 44 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಬಿಜೆಪಿ ಪಕ್ಷದೊಳಗಿನ ತಕರಾರು, ಮೀಸಲಾತಿ ಬದಲಾವಣೆ ಯತ್ನದಿಂದಾಗಿ ಮೇಯರ್ ಸ್ಥಾನ ಖಾಲಿ ಉಳಿದಿತ್ತು. ಇದೀಗ ಈ ಹಿಂದೆ ನಿಗದಿಯಾಗಿದ್ದಂತೆಯೇ 21ನೇ ಅವಧಿಯ ಮೀಸಲು ಪ್ರಕಾರವೇ ಚುನಾವಣೆ ನಡೆಸುವಂತೆ ಸರಕಾರ ಆದೇಶ ಹೊರಡಿಸಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಗೆ ನೀಡುವ ಮೂಲಕ ಮೀಸಲಾತಿ ಪ್ರಕಟಿಸಿದೆ. ಹೀಗಾಗಿ ಫೆಬ್ರವರಿ 28ರಂದು ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.