ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ( Renukaswamy) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ಚಲನಚಿತ್ರ ನಟ ದರ್ಶನ್ ತೂಗುದೀಪ(Darshan Thoogudeepa) ಅವರಿಗೆ ಸಿಸಿಹೆಚ್ ಕೋರ್ಟ್ ಜಾಮೀನು ನಿರಾಕರಣೆ ಮಾಡಿದ್ದು ಅರ್ಜಿಯನ್ನು ವಜಾ ಮಾಡಿದೆ. ಇದೇ ವೇಳೆ, ಪ್ರಕರಣದ ಮೊದಲನೇ ಆರೋಪಿಯಾಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ (Pavitra Gowda) ಜಾಮೀನು ಅರ್ಜಿಯನ್ನು ಕೂಡಾ ಕೋರ್ಟ್ ವಜಾ ಮಾಡಿದೆ.
ಈ ಮಧ್ಯೆ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ರವಿ ಮತ್ತು ಹದಿಮೂರನೇ ಆರೋಪಿಯಾಗಿರುವ ದೀಪಕ್ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಇತರ ಮೂವರು ಆರೋಪಿಗಳಿಗೆ ಕಳೆದ ವಾರವೇ ಜಾಮೀನು ಲಭ್ಯವಾಗಿತ್ತು.

ತೀವ್ರ ಬೆನ್ನು ನೋವಿನ ನಡುವೆಯೂ ಇಂದು ಜಾಮೀನು ದೊರೆಯುವ ಪ್ರಬಲ ವಿಶ್ವಾಸದಲ್ಲಿದ್ದ ನಟ ದರ್ಶನ್ ಗೆ ತೀವ್ರ ನಿರಾಸೆಯಾಗಿದ್ದು, ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಲಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಇಂದು ದರ್ಶನ್ ಗೆ ಜಾಮೀನು ದೊರೆಯುವ ವಿಶ್ವಾಸದಲ್ಲಿ ನೂರಕ್ಕೂ ಹೆಚ್ಚು ಅಭಿಮಾನಿಗಳು ಬಳ್ಳಾರಿ ಜೈಲಿನ ಮುಂದೆ ನೆರೆದಿದ್ದರು.
ಇನ್ನು ನಟ ಧನ್ವೀರ್, ಸುಶಾಂತ್ ಮತ್ತು ಹೇಮಂತ್ ಇಂದೂ ಕೂಡಾ ಜೈಲಿನಲ್ಲಿ ದರ್ಶನ್ ರನ್ನು ಭೇಟಿ ಮಾಡಿದ್ದರು. ಇದೇ ವೇಳೆ ಬಳ್ಳಾರಿಯಲ್ಲಿ ಇಂದು ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತ್ರ ಭೇಟಿ ಮಾಡಲಿಲ್ಲ.

ಇದೇ ವೇಳೆ ಆರೋಪಿಗಳ ಜಾಮೀನು ಅರ್ಜಿ ವಜಾ ಆಗಿರುವುದಕ್ಕೆ ಹತ್ಯೆಗೊಳಗಾದ ರೇಣುಕಾಸ್ವಾಮಿ ಕುಟುಂಬಸ್ಥರು ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು, ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇದ್ದು, ಆರೋಪಿಗಳಿಗೆ ಶೀಘ್ರ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ಮೃತ ರೇಣುಕಾಸ್ವಾಮಿ ಪತ್ನಿ ಸಹನಾ ಗರ್ಭಿಣಿಯಾಗಿದ್ದು, ಮುಂದಿನ ತಿಂಗಳು ಹೆರಿಗೆಯಾಗಲಿದೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರ ಸಹನಾ ಜೀವನೋಪಾಯಕ್ಕೆ ಸರ್ಕಾರಿ ನೌಕರಿ ನೀಡಿ ನೆರವು ನೀಡಬೇಕು ಎಂದು ರೇಣುಕಾಸ್ವಾಮಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.ಪ್ರಕರಣದಲ್ಲಿ ಎ2 ಆರೋಪಿ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಿಸಿದ್ದರೆ, ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದರು.