ಮೈಸೂರು: ರಾಜ್ಯದಲ್ಲಿ ಉಪಚುನಾವಣೆ ಮತದಾನ ಮುಕ್ತಾಯ ವಾಗಿದ್ದು, ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆ ಸೇರಿದೆ.

ಈಮಧ್ಯೆ ಹಣಾಹಣಿ ಚುನಾವಣೆಯ ಬಳಿಕ ಮೈಸೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ಮಾಜಿಸಿಎಂ ಸಿದ್ಧ ರಾಮಯ್ಯ ಉಪಚುನಾವಣೆ ಫಲಿತಾಂಶದ ಬಳಿಕ ಬಿಎಸ್ವೈ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಫಲಿತಾಂಶದ ಬಳಿಕ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆ ಮಾಡಲಿದೆ. ಇದು ಖಚಿತ ಮಾಹಿತಿ. ದೆಹಲಿಯಿಂದ ಬಂದ ಮಾಹಿತಿ ಆಧರಿಸಿ ಹೇಳುತ್ತಿದ್ದೇನೆ. ರಾಜ್ಯದಲ್ಲಿ ಹೊಸಸಿಎಂ ನೇಮಕವಾಗಲಿದೆ ಎಂದು ಸಿದ್ಧು ಪುನರುಚ್ಛರಿಸಿದ್ದಾರೆ.

ನಾನು ಬಿಎಸ್ವೈ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು ಒಂದು ಕಾರಣ. ಅದರೊಂದಿಗೆ ಬಿಜೆಪಿಯೇ ಬೇರೆ ಬೇರೆ ಕಾರಣಗಳಿಗಾಗಿ ಸಿಎಂ ಬದಲಾವಣೆಗೆ ನಿರ್ಧರಿಸಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಇತ್ತೀಚಿಗಷ್ಟೇ ಸಿಎಂ ಬಿಎಸ್ವೈ ಬದಲಾವಣೆಯಾಗುತ್ತೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಕೂಡ ಸಿಎಂ ಬದಲಾವಣೆ ಸನ್ನಿಹಿತ ಎಂದು ಭವಿಷ್ಯ ನುಡಿದಿದ್ದಾರೆ.