ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು ಐರೋಡಿ, ಹೆಗ್ಗುಂಜೆ ಹಾಗೂ ಹಿಲಿಯಾಣದಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಎರಡು ಫ್ಯಾಕ್ಟರ್, ಮೂರು ಮನೆಗಳನ್ನು ಕೋಟ ಕಂದಾಯ ನಿರೀಕ್ಷಕ ರಾಜು ಅವರ ನೇತೃತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಐರೋಡಿಯಲ್ಲಿ ವೈದ್ಯರೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಮನೆ ಹಾಗೂ ತಂದೆಗೆ ಸೇರಿದ ಆಹಾರ ತಯಾರಿಕಾ ಘಟಕವನ್ನು ಸೀಲ್ ಡೌನ್ ಮಾಡಲಾಗಿದೆ.

ಕುಂದಾಪುರದಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಐರೋಡಿಯ ನಿವಾಸಿಯೋರ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೋಂಕಿತರು ವಾಸಿಸುತ್ತಿದ್ದ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಹೆಗ್ಗುಂಜೆಯಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಸ್ಸಾಂ ಮೂಲದ ನೌಕರರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕಾರ್ಖಾನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಹಿಲಿಯಾಣದಲ್ಲಿ ಮಹಿಳೆಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಿನ್ನೆಲೆಯಲ್ಲಿ ಮಹಿಳೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಆರೋಗ್ಯ ಸಿಬ್ಬಂದಿಗಳು ಮಾಡುತ್ತಿದ್ದಾರೆ.