ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 5 ಕೋಟಿ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದಾರೆನ್ನುವ ಆರೋಪಕ್ಕೆ ಬೇಸತ್ತು ನಾನು ನೀಡಿದ್ದ ದೂರನ್ನು ವಾಪಾಸ್ ಪಡೆಯುತ್ತಿದ್ದೇನೆ ಎಂದು ದೂರುದಾರ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆನ್ನುವ ನಿಟ್ಟಿನಲ್ಲಿ ದೂರು ನೀಡಿದ್ದೇನೆ. ಆದರೆ ಕುಮಾರಸ್ವಾಮಿ ಅವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಹೋರಾಟಗಾರರನ್ನು ಬಾಯಿ ಮುಚ್ಚಿಸುವ ಕಾರ್ಯವನ್ನು ಮಾಡಿದ್ದಾರೆ. ಇದರಿಂದಾಗಿ ನಾನು ನನ್ನನ್ನು ಜನರು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ 100 ರಿಂದ 150 ಕರೆಗಳು ಬರುತ್ತಿವೆ. ನಾನು ಮೊದಲು ಆರೋಪ ಮುಕ್ತನಾಗಬೇಕು ಆಮೇಲೆ ಹೋರಾಟವನ್ನು ಮುಂದುವರಿಸುತ್ತೇನೆ. ನಾನು ದೂರನ್ನು ನೀಡಿದ್ದೇನೆಯೇ ವಿನಃ ನಾನು ಯಾವುದೇ ಸಿಡಿಯನ್ನು ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.
ಸಿಡಿಯಲ್ಲಿ ಯುವತಿಯ ಚಾರಿತ್ರ್ಯವಧೆ ನಡೆಯುತ್ತಿದೆ. ದೂರು ಕೊಟ್ಟವರನ್ನೇ ಆರೋಪಿಯನ್ನಾಗಿ ನೋಡಲಾಗುತ್ತಿದೆ. ಸಂತ್ರಸ್ತೆ ಮತ್ತು ನನಗೆ ತಿರುಗುಬಾಣವಾಗಿದೆ. ನಾನು ಯಾರ ಮಾನಹಾನಿ ಯಾಗುವ ಕಾರ್ಯವನ್ನು ಮಾಡಿಲ್ಲ. ನಾನು ಕೂಡ ಹೋರಾಟವನ್ನು ಮುಂದುವರಿಸುತ್ತೇನೆ. ರಾಜಕೀಯ ಕೇಂದ್ರಿತ ಅಧಿಕಾರದಿಂದಾಗಿ ಯುವತಿ ಅಪರಾಧಿಯಾಗಿದ್ದಾಳೆ ಎಂದಿದ್ದಾರೆ.