ಕೊಡಗು: ಪ್ರತಿಯೊಂದು ಜಾತಿ-ಧರ್ಮದವರಿಗೂ ಅವರವರ ಆಚರಣೆ,ಸಂಪ್ರದಾಯದ ಬಗ್ಗೆ ಗೌರವವಿರೋದು ಸಹಜ. ವಿಶಿಷ್ಟ ಸಂಪ್ರದಾಯ ಹಾಗೂ ಸಂಸ್ಕೃತಿಯೊಂದಿಗೆ ಬದುಕುತ್ತಿರುವ ಕೊಡವರು ಇದಕ್ಕೆ ಹೊರತಲ್ಲ. ಆದರೆ ಇತ್ತೀಚಿಗೆ ಅಮೆರಿಕಾದಲ್ಲಿ ನಡೆದ ವಿವಾಹವೊಂದು ಕೊಡವರ ಕೆಂಗಣ್ಣಿಗೆ ಗುರಿಯಾಗಿದ್ದು, ಕೊಡವ ಸಂಪ್ರದಾಯದಂತೆ ಹಸೆಮಣೆ ಏರಿದ ಯುವಕನನ್ನು ಸಮಾಜದಿಂದಲೇ ಹೊರಗಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ಇಷ್ಟಕ್ಕೂ ಕೊಡವರ ಈ ಆಕ್ರೋಶಕ್ಕೆ ಕಾರಣ ಏನು ಅಂದ್ರಾ ಅಮೇರಿಕಾದಲ್ಲಿ ಕೊಡವ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ವಧು-ವರ ಇರಲಿಲ್ಲ. ಬದಲಾಗಿ ಮದುವೆಯಾದವರಿಬ್ಬರು ಗಂಡುಮಕ್ಕಳು.ಸಲಿಂಗ ವಿವಾಹವನ್ನು ಕೊಡವ ಶೈಲಿಯಲ್ಲಿ ಮಾಡಿಕೊಳ್ಳುವ ಮೂಲಕ ನಮ್ಮ ಸಂಪ್ರದಾಯ,ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂಬುದು ಕೊಡವ ಸಮಾಜದವರ ಅಸಮಧಾನ. ಅಷ್ಟೇ ಅಲ್ಲ ಮದುವೆ ಯಲ್ಲಿ ಕೊಡವರ ಸಾಂಪ್ರದಾಯಿಕ ಉಡುಗೆಯನ್ನು ಅವಮಾನಿಸಲಾಗಿದೆ ಎಂದು ಕೊಡವ ಸಮಾಜದ ಮುಖಂಡರು ಆರೋಪಿಸಿದ್ದಾರೆ.

ಕೊಡಗು ಮೂಲದ ಶರತ್ ಪೊನ್ನಪ್ಪ್ ಕಳೆದ 20 ವರ್ಷದಿಂದ ಕ್ಯಾಲಿಪೋರ್ನಿಯಾದಲ್ಲಿ ನೆಲೆಸಿದ್ದಾರೆ. ಅಲ್ಲಿಯ ನಿವಾಸಿಯಾಗಿರುವ ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬಾತನನ್ನು ಪ್ರೀತಿಸಿದ ಶರತ್ ಸೆ.26 ರಂದು ಕೊಡವ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇದು ನಮ್ಮ ನಂಬಿಕೆ,ಸಂಸ್ಕೃತಿ,ಸಂಪ್ರದಾಯಕ್ಕೆ ಎಸಗಲಾದ ಅವಮಾನ ಎಂದಿರುವ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಬಗ್ಗೆ ಅಮೆರಿಕಾದ ಕೊಡವ ಒಕ್ಕೂಟಕ್ಕೆ ಪತ್ರ ಬರೆದು ಸ್ಪಷ್ಟನೆ ಕೋರಿದ್ದಾರೆ.

ಶರತ್ ಪೊನ್ನಪ್ಪ್ ಮೈಸೂರಿನ ರಾಮಕೃಷ್ಣಮಿಶನ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಕಳೆದ 20 ವರ್ಷದಿಂದ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಅವರ ತಂದೆ ಹಾಗೂ ತಾಯಿ ದುಬೈಯಲ್ಲಿ ಉದ್ಯೋಗದಲ್ಲಿದ್ದವರಾಗಿದ್ದು, ಈಗ ನಿವೃತ್ತ ಬಳಿಕ ಮೈಸೂರಿನಲ್ಲಿ ನೆಲೆಸಿದ್ದಾರೆ. ಯಾವುದೇ ಸಂಸ್ಕೃತಿ,ಸಂಪ್ರದಾಯ ಹಾಗೂ ಬಹುಸಂಖ್ಯಾತರ ಭಾವನೆಗಳಿಗೆ ನೋವು ತರುವ ಅಧಿಕಾರ ಯಾರಿಗೂ ಇಲ್ಲ. ಶರತ್ ಕೊಡವರ ಕ್ಷಮೆ ಕೇಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.